ಕಠ್ಮಂಡು: ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯ ಮೇಲ್ಭಾಗದಲ್ಲಿ ಹೊಸದಾಗಿ ರೂಪುಗೊಂಡಿರುವ ಬ್ಯಾರಿಯರ್ ಲೇಕ್ (ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರ) ಮೂರ್ನಾಲ್ಕು ದಿನಗಳಲ್ಲಿ ಒಡೆದು ಹೋಗುವ ಸಾಧ್ಯತೆ ಇದ್ದು, ಮತ್ತೊಂದು ಪ್ರವಾಹದ ಭೀತಿಯನ್ನು ಹುಟ್ಟುಹಾಕಿದೆ.
ಈ ಕುರಿತು ಚೀನಾ ಅಧಿಕಾರಿಗಳು ಮಾಹಿತಿ ನೀಡಿದ್ದು, ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ (ಡಿಎಚ್‌ಎಂ) ನದಿ ತೀರದ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ನೇಪಾಳ-ಚೀನಾ ಗಡಿ ಸಮೀಪ ಭೋಟೆ ಕೋಶಿ ನದಿಗೆ ತಡೆ ಉಂಟಾದ ಸ್ಥಳದಲ್ಲಿ ಈ ಸರೋವರ ರೂಪುಗೊಂಡಿದ್ದು, ಅದರ ನೈಸರ್ಗಿಕ ತಡೆಗೋಡೆ ದುರ್ಬಲವಾಗುವ ಸಾಧ್ಯತೆ ಇದೆ ಎಂದು ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.
ಬ್ಯಾರಿಯರ್ ಲೇಕ್ ಎಂದರೇನು?
ಪ್ರವಾಹ, ಭೂಕುಸಿತ, ಹಿಮಪಾತದಂತಹ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನದಿಯ ಹರಿವಿಗೆ ಅಡ್ಡಿಯಾಗಿ ಮಣ್ಣು, ಕಲ್ಲು ಮತ್ತು ಇತರ ಅವಶೇಷಗಳು ನೈಸರ್ಗಿಕ ತಡೆಗೋಡೆಯಾಗಿ ರೂಪುಗೊಳ್ಳುತ್ತವೆ. ಇದರಿಂದ ನದಿಯ ನೀರು ಮುಂದೆ ಹರಿಯದೆ ಸಂಗ್ರಹವಾಗಿ ಹೊಸ ಸರೋವರ ನಿರ್ಮಾಣವಾಗುತ್ತದೆ. ಇದನ್ನೇ ಬ್ಯಾರಿಯರ್ ಲೇಕ್ ಎಂದು ಕರೆಯಲಾಗುತ್ತದೆ.
ಆದರೆ ಈ ನೈಸರ್ಗಿಕ ತಡೆಗೋಡೆ ಒಡೆದರೆ, ಸರೋವರದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರು ಒಂದೇ ಬಾರಿ ಕೆಳಭಾಗಕ್ಕೆ ಹರಿದು ಭಾರೀ ಪ್ರವಾಹಕ್ಕೆ ಕಾರಣವಾಗಬಹುದು.
20 ಲಕ್ಷ ಘನ ಮೀಟರ್ ನೀರು ಸಂಗ್ರಹ
ಚೀನಾ ಅಧಿಕಾರಿಗಳ ಅಂದಾಜಿನ ಪ್ರಕಾರ, ಗುರುವಾರ ಬೆಳಿಗ್ಗೆ ವೇಳೆಗೆ ಸರೋವರದಲ್ಲಿ ಸುಮಾರು 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿತ್ತು. ಮುಂದಿನ ಮೂರು ದಿನಗಳಲ್ಲಿ ಇನ್ನೂ 30 ಲಕ್ಷ ಘನ ಮೀಟರ್ ನೀರು ಸೇರುವ ಸಾಧ್ಯತೆ ಇದ್ದು, ತಡೆಗೋಡೆ ಒಡೆದರೆ ಭೀಕರ ಪ್ರವಾಹ ಸಂಭವಿಸಬಹುದು.
ಎಲ್ಲಿದೆ ಈ ಸರೋವರ?
ನೇಪಾಳದ ಚೊಛೆನ್ ಖೋಲಾ ಮತ್ತು ಪುರೇಪು ತ್ಸಾಂಗ್ಪೊ ನದಿಗಳ ಸಂಗಮದ ಸಮೀಪ ಈ ಸರೋವರ ನಿರ್ಮಾಣವಾಗಿದೆ. ಟಿಬೆಟ್‌ನಲ್ಲಿ ಹುಟ್ಟುವ ಈ ಎರಡು ನದಿಗಳು ನೇಪಾಳ ಪ್ರವೇಶಿಸಿದ ಬಳಿಕ ಭೋಟೆ ಕೋಶಿ ನದಿಯಲ್ಲಿ ಸಂಗಮವಾಗುತ್ತದೆ.
ಮತ್ತೊಂದು ಪ್ರವಾಹದ ಭೀತಿ
ಕೇಂದ್ರ ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ದುರಂತದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆ ಪ್ರವಾಹದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ಇದೀಗ ಬ್ಯಾರಿಯರ್ ಲೇಕ್ ರೂಪುಗೊಂಡಿರುವುದು ಅಧಿಕಾರಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಭೋಟೆ ಕೋಶಿ ನದಿಯ ಕೆಳಭಾಗದಲ್ಲಿ ವಾಸಿಸುವ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನದಿ ತೀರಗಳಿಂದ ದೂರವಿದ್ದು, ಸ್ಥಳೀಯ ಆಡಳಿತ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.

