ಮುಂಬೈ: 'ವಿಮಲ್ ಇಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಕಾರಣ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ನೀಡಿದ್ದ ಶೋಕಾಸ್ ನೋಟಿಸ್‌ಗೆ ಬಾಲಿವುಡ್ ನಟರಾದ ಶಾರುಕ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ.
ಆಗಸ್ಟ್ 11ರಂದು ನೋಟಿಸ್ ನೀಡಿ, ಲಿಖಿತ ವಿವರಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಡೆ ಅವರು, 'ಇದುವರೆಗೂ ನಟರು ನೋಟಿಸ್‌ಗೆ ಉತ್ತರಿಸಿಲ್ಲ' ಎಂದು ತಿಳಿಸಿದರು. 'ಎಫ್‌ಡಿಎ ಮುಂದಿನ ಕ್ರಮದ ಕುರಿತು ನೋಟಿಸ್‌ನಲ್ಲಿಯೇ ಉಲ್ಲೇಖಿಸಲಾಗಿದೆ' ಎಂದು ಹೇಳಿದರು.
'ನಿಷೇಧಿತ ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳ ಕುರಿತು ಈ ಜಾಹೀರಾತು ಮೂಲಕ 'ಪರೋಕ್ಷ' ಅಥವಾ 'ಪರ್ಯಾಯ' ರೂಪದಲ್ಲಿ ಪ್ರಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ' ಎಂದು ನೋಟಿಸ್‌ನಲ್ಲಿ ಹೇಳಲಾಗಿತ್ತು.
ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾವನ್ನು 2012ರಿಂದ ನಿಷೇಧಿಸಲಾಗಿದೆ.

