HEALTH TIPS

| ಟಿಇಎಂ ವಿವಿಯಲ್ಲಿ ಜಾತಿ ತಾರತಮ್ಯ ಆರೋಪಿಸಿ ದಲಿತ ಪಿಎಚ್‌ಡಿ ವಿದ್ಯಾರ್ಥಿನಿಯಿಂದ ಪ್ರತಿಭಟನೆ

ತಿರುವನಂತಪುರ: ಮಲಪ್ಪುರಂ ಜಿಲ್ಲೆಯ ತಿರೂರಿನ ತುಂಜತ್ ಎಳುತ್ತಚ್ಚನ್ ಮಲಯಾಳಂ (ಟಿಇಎಂ) ವಿಶ್ವವಿದ್ಯಾಲಯದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳನ್ನು ನಿರಾಕರಿಸಿರುವುದನ್ನು ಪ್ರತಿಭಟಿಸಿ ದಲಿತ ಪಿಎಚ್‌ಡಿ ವಿದ್ಯಾರ್ಥಿನಿಯೋರ್ವರು ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.


ಶೈಕ್ಷಣಿಕ ಅವಕಾಶಗಳ ನಿರಾಕರಣೆಯಿಂದಾಗಿ ತನ್ನ ಸಂಶೋಧನೆ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಮಾರ್ಚ್ 2024ರಲ್ಲಿ ವಿವಿಯ ಪರಿಸರ ವಿಜ್ಞಾನ ವಿಭಾಗಕ್ಕೆ ದಾಖಲಾಗಿದ್ದ ಅನಘಾ ಶಶಿ, ತನ್ನ ಪಿಎಚ್‌ಡಿ ಕೋರ್ಸ್‌ವರ್ಕ್ ಮುಗಿಸಿ ಒಂದು ವರ್ಷವೇ ಕಳೆದಿದ್ದರೂ ಡಾಕ್ಟರಲ್ ಕಮಿಟಿ ಸಭೆ ಸೇರದ ಕಾರಣ ಇನ್ನೂ ತನ್ನ ಸಂಶೋಧನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ತನ್ನ ವಾರ್ಷಿಕ ಪ್ರಗತಿ ವರದಿಯ ವಿಳಂಬವು ಕೇರಳ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಫೆಲೋಶಿಪ್ ಅನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಸಂಶೋಧನೆಯ ಬದಲು ಪ್ರಯೋಗಾಲಯದ ಉಪಕರಣಗಳನ್ನು ತೊಳೆಯುವ, ಹಳೆಯ ದಾಖಲೆಗಳು, ಪ್ರಬಂಧಗಳು ಮತ್ತು ಅಧ್ಯಯನ ಪ್ರವಾಸದ ವರದಿಗಳನ್ನು ಜೋಡಿಸಿಡುವುದು ಸೇರಿದಂತೆ ಶುಚಿಗೊಳಿಸುವ ಮತ್ತು ಗುಮಾಸ್ತಗಿರಿಯ ಕೆಲಸಗಳನ್ನು ತನಗೆ ವಹಿಸಲಾಗಿತ್ತು. ತನಗೆ ಕುರ್ಚಿ ಮತ್ತು ಕೆಲಸದ ಸ್ಥಳವನ್ನು ನಿರಾಕರಿಸಲಾಗಿತ್ತು ಎಂದು ಅನಘಾ ಆರೋಪಿಸಿದ್ದಾರೆ.

ತನ್ನ ಮಾರ್ಗದರ್ಶಿ ಅರುಣ್ ಬಾಬು ವಿ. ಮತ್ತು ಅಧ್ಯಾಪಕಿ ಜೈನಿ ವರ್ಗೀಸ್ ಅವರು ತನಗೆ ಶೈಕ್ಷಣಿಕ ಮಾರ್ಗದರ್ಶನವನ್ನು ಪದೇ ಪದೇ ನಿರಾಕರಿಸಿದ್ದಾರೆ ಮತ್ತು ಪಿಎಚ್‌ಡಿ ತೊರೆಯುವಂತೆ ಹೇಳುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಫೆಲೋಶಿಪ್ ಪಡೆದ ನಂತರ ಮತ್ತು ಯುಜಿಸಿ-ನೀಟ್ ಅರ್ಹತೆ ಪಡೆದ ನಂತರ ಜಾತಿಯ ಕಾರಣದಿಂದಾಗಿಯೇ ಈ ಫೆಲೋಶಿಪ್ ಸಿಕ್ಕಿದೆ ಎಂದು ತನ್ನ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅನಘಾರ ತಾಯಿ ಅಂಬಿಕಾ ಶಶಿ ಕೂಡ ಪುತ್ರಿಯ ಪ್ರತಿಭಟನೆಗೆ ಸಾಥ್ ನೀಡಿದ್ದು, ಆಕೆಯ ಶಿಕ್ಷಣಕ್ಕಾಗಿ ಕುಟುಂಬವು ಸಾಲ ಮಾಡಿದೆ ಎಂದು ಹೇಳಿದ್ದಾರೆ.

ನ್ಯಾಯಯುತ ತನಿಖೆ, ಅನಘಾರ ಡಾಕ್ಟರಲ್ ಕಮಿಟಿಯ ಸಭೆಯನ್ನು ತಕ್ಷಣವೇ ಕರೆಯುವುದು, ಅವರ ವಾರ್ಷಿಕ ಪ್ರಗತಿ ವರದಿಯ ಅನುಮೋದನೆ ಮತ್ತು ತಾರತಮ್ಯದ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿವಿಯ ಎಸ್‌ಸಿ, ಎಸ್‌ಟಿ ಸೆಲ್‌ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅನಘಾ ಆರೋಪಿಸಿದ್ದಾರೆ.

ಬುಧವಾರ ವಿವಿಯು ಈ ಆರೋಪಗಳ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇದು ತನ್ನ ಪಾಲಿನ ವಿಜಯ ಎಂದು ಬಣ್ಣಿಸಿರುವ ಅನಘಾ, ಆದರೆ ತನ್ನ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಕೇರಳ ಉನ್ನತ ಶಿಕ್ಷಣ ಸಚಿವ ರೋಜಿ ಎಂ.ಜಾನ್ ಅವರು ಗುರುವಾರ ಅನಘಾ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries