ಮಂಗಳೂರು: ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ಜತೆ ವಿಭಜನೆಗೊಂಡಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ತರಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶಿಸಿದೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯವು ನೈರುತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಮುಖ್ಯಸ್ಥರಿಗೆ ಶುಕ್ರವಾರ ರವಾನಿಸಿರುವ ಆದೇಶ ಪತ್ರವನ್ನು ಹಂಚಿಕೊಂಡಿರುವ ದ.ಕ. ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಅವರು, ಕೊನೆಗೂ ಬಹುಕಾಲದ ಬೇಡಿಕೆಗೆ ಈಡೇರುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ತೊಕೂರು ರೈಲ್ವೆ ನಿಲ್ದಾಣ
ಈ ಹೊಸ ನಿರ್ಧಾರದ ಪ್ರಕಾರ, ಉಳ್ಳಾಲವರೆಗಿನ (ಉಳ್ಳಾಲ ಸೇರಿದಂತೆ) ಮಂಗಳೂರು ರೈಲ್ವೆ ವ್ಯಾಪ್ತಿಯು ಮೈಸೂರು ವಿಭಾಗಕ್ಕೆ ಒಳಪಡಲಿದೆ. ಇದರೊಂದಿಗೆ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆಯ ಇಂಟರ್‌ಚೇಂಜ್ (ಬದಲಾವಣೆ) ಪಾಯಿಂಟ್ ಇದುವರೆಗೆ ಪಡೀಲ್‌ನಲ್ಲಿದ್ದು, ಇನ್ನು ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನು ತೊಕೂರು ರೈಲ್ವೆ ನಿಲ್ದಾಣವು ಪ್ರಸ್ತುತ ಇರುವಂತೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ಮತ್ತು ಹೊಸ ರೈಲುಗಳ ಚಾಲನೆಯ ಹಿನ್ನಲೆಯಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಗೆ ಸೇರ್ಪಡೆಯಾಗುವುದು ಅಗತ್ಯವಾಗಿತ್ತು. ಪಾಲಕ್ಕಾಡ್ ವಿಭಾಗದಲ್ಲಿದ್ದಾಗ ಎದುರಾಗುತ್ತಿದ್ದ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳು ಈ ನಿರ್ಧಾರದಿಂದ ನಿವಾರಣೆಯಾಗಲಿವೆ. ಕರ್ನಾಟಕದ ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳ ವಿಸ್ತರಣೆಗೆ ಹಾಗೂ ಮಂಗಳೂರು ಭಾಗದ ಮೂಲ ಸೌಕರ್ಯ ಅಭಿವೃದ್ಧಿಗೆ ಈ ಐತಿಹಾಸಿಕ ಬದಲಾವಣೆ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆ ಹೊಂದಲಾಗಿದೆ.
'2024ರ ಜೂನ್‌ನಲ್ಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರೈಲ್ವೇ ಬಳಕೆದಾರರ ಈ ಬೇಡಿಕೆಯನ್ನು ಪ್ರಮುಖ ಆದ್ಯತೆಯಾಗಿ ಮುಂದಿಟ್ಟಿದ್ದೆವು. ಅಂದಿನಿಂದ ಈ ವಿಚಾರವನ್ನು ನಿರಂತರವಾಗಿ ಫಾಲೋಅಪ್ ಮಾಡಿಕೊಂಡು ಬರಲಾಗಿದ್ದು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ಹಲವು ಬಾರಿ ಈ ಬೇಡಿಕೆಯನ್ನು ಪ್ರಸ್ತಾವಿಸಲಾಗಿದೆ. ಈ ಬಹುಕಾಲದ ಬೇಡಿಕೆಯನ್ನು ಮುನ್ನಡೆಸುವಲ್ಲಿ ಅವರು ತೋರಿದ ಸಕ್ರಿಯ ಸ್ಪಂದನೆ ಮತ್ತು ಸಹಕಾರವನ್ನು ಸ್ಮರಿಸುತ್ತೇನೆ' ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಇದು ಮಂಗಳೂರಿಗೆ ಮಹತ್ವದ ಹೆಜ್ಜೆಯಾಗಿದೆ. ರೈಲ್ವೆ ವಲಯಗಳ ನಡುವಿನ ಆಡಳಿತಾತ್ಮಕ ಅಡೆತಡೆಗಳು ಕಡಿಮೆಯಾಗಲಿದ್ದು, ಸಮನ್ವಯ ಸುಧಾರಿಸಲಿದೆ. ಪ್ರಯಾಣಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯುವುದರ ಜೊತೆಗೆ, ಕರಾವಳಿ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ದೊರೆಯ ಲಿದೆ. ಇದರ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಇದರಿಂದ ಮಂಗಳೂರಿನ ರೈಲ್ವೆ ಸಂಬಂಧಿತ ಹಲವು ಸಮಸ್ಯೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪರಿಹರಿಸಲು ಸಾಧ್ಯವಾಗಲಿದೆ. ಮುಖ್ಯವಾಗಿ, ಮಂಗಳೂರಿನ ರೈಲ್ವೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ, ವಿಕಾಸದ ಹಾದಿಯಲ್ಲಿ ರೈಲ್ವೆಯನ್ನೂ ಇನ್ನಷ್ಟು ವೇಗವಾಗಿ ಮುನ್ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಅ.1 ರಿಂದ ಅಧಿಕೃತ ಜಾರಿ
ಮಂಗಳೂರು ರೈಲ್ವೇ ಪ್ರದೇಶವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವ್ಯಾಪ್ತಿಗೆ ತರುವ ಆಡಳಿತಾತ್ಮಕ ಬದಲಾವಣೆಯು ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ, ಗೆಜೆಟೆಡ್ ಅಧಿಕಾರಿಗಳಿಗೆ ಜಾರಿಯಲ್ಲಿರುವ ನಿಯಮಾವಳಿಗಳಂತೆ ವರ್ಗಾವಣೆ ಆದೇಶ ನೀಡಲಾಗುತ್ತದೆ. ನಾನ್-ಗೆಜೆಟೆಡ್ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಉಳಿಯುವ ಅಥವಾ ನೈರುತ್ಯ ರೈಲ್ವೆಗೆ ಬದಲಾಗುವ ಆಯ್ಕೆಯನ್ನು ನೀಡಲಾಗುತ್ತಿದ್ದು, ಸೇವಾವಧಿಯ ಆಧಾರದ ಮೇಲೆ ಜೇಷ್ಠತೆ ನಿಗದಿಯಾಗಲಿದೆ.

