ನವದೆಹಲಿ: ದೇಶದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ 'ಬೌದ್ಧಿಕ ನಕ್ಸಲ್'ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.
ದೆಹಲಿಯ ಕೆಂಪುಕೋಟೆಯ ಆವರಣದಿಂದ ಶನಿವಾರ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಬಂದೂಕು ಹಿಡಿದ ನಕ್ಸಲರನ್ನು ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ.
ಆದರೆ ಈ ಸವಾಲನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.
'ಮಾವೋವಾದಿ ಚಿಂತನೆ ಹೊಂದಿರುವ ಕೆಲವರು ವರ್ಷಗಳ ಕಾಲ ದೇಶದ ಅಧಿಕಾರ ಕೇಂದ್ರಗಳಲ್ಲಿ ನೆಲೆಸಿದ್ದರು. ಸರ್ಕಾರದ ಸಮಿತಿಗಳಲ್ಲಿ ಸಲಹೆಗಾರರಾಗಿ ಇದ್ದು, ನೀತಿ ನಿರ್ಧಾರಗಳ ಮೇಲೂ ಪ್ರಭಾವ ಬೀರಿದ್ದರು' ಎಂದು ಮೋದಿ ಆರೋಪಿಸಿದರು.
ಬಂದೂಕು ಹಿಡಿದ ನಕ್ಸಲರು ದುರ್ಬಲಗೊಂಡಿದ್ದರೂ, 'ಬೌದ್ಧಿಕ ನಕ್ಸಲ್‌ಗಳು' ಇನ್ನೂ ಉಳಿದಿದ್ದಾರೆ ಎಂದು ಹೇಳಿದ ಅವರು, ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಅವರು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು. ಯುವಜನರನ್ನು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಮುಖ್ಯವಾಹಿನಿಯೊಂದಿಗೆ ಕೊಂಡೊಯ್ಯಲು ಇಂತಹ ಶಕ್ತಿಗಳನ್ನು ಗುರುತಿಸಿ ಪ್ರತ್ಯೇಕಿಸಬೇಕು ಎಂದು ಮೋದಿ ಕರೆ ನೀಡಿದರು.
'ಅರ್ಬನ್ ನಕ್ಸಲ್' …
ಮೋದಿ ಅವರ ಹೊಸ ಪದಪ್ರಯೋಗದ ಕುರಿತು ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ತಮ್ಮ ಟೀಕಾಕಾರರನ್ನು ಹಿಂದೆ 'ಅರ್ಬನ್ ನಕ್ಸಲ್' ಎಂದು ಕರೆಯುತ್ತಿದ್ದವು ಎಂದು ಟೀಕಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದು ಸರ್ಕಾರದ ಹತಾಶೆಯ ಸಂಕೇತ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಕ್ಸಲಿಸಂ ವಿರುದ್ಧ ಸರ್ಕಾರದ ಕ್ರಮ
ನಕ್ಸಲಿಸಂ ಅನೇಕ ಯುವಕರ ಬದುಕನ್ನು ಹಾಳು ಮಾಡಿದೆ ಮತ್ತು ಸಾವಿರಾರು ಕುಟುಂಬಗಳ ಕನಸುಗಳನ್ನು ನಾಶಪಡಿಸಿದೆ ಎಂದು ಮೋದಿ ಹೇಳಿದ್ದಾರೆ. ನಕ್ಸಲಿಸಂ ದೇಶದ ದೊಡ್ಡ ಭಾಗ ಮತ್ತು ಜನಸಂಖ್ಯೆಯ ಮೇಲೆ ಪ್ರಭಾವ ಬೀರಿತ್ತು. ಸಾಮಾನ್ಯ ಜನರ ರಕ್ಷಣೆಗಾಗಿ 3,500ಕ್ಕೂ ಹೆಚ್ಚು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಾಗಲೇ ನಕ್ಸಲಿಸಂ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಲಾಗಿತ್ತು ಎಂದು ಹೇಳಿದ ಮೋದಿ, ಇಂದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ, ವಿಶ್ವಾಸ ಮತ್ತು ಪ್ರಯತ್ನದ ತ್ರಿವರ್ಣ ಧ್ವಜ ಹಾರುತ್ತಿದೆ ಎಂದು ಹೇಳಿದರು.

