ಅಹಮದಾಬಾದ್: ಗುಜರಾತ್‌ನಲ್ಲಿ ಚಂಡೀಪುರ ಸೋಂಕು ಮಾರಕವಾಗಿ ಪರಿಣಮಿಸಿದ್ದು, ಈ ಮುಂಗಾರು ಅವಧಿಯಲ್ಲಿ 22 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
'ಪ್ರಸ್ತುತ ಏಳು ಸೋಂಕಿತರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ' ಎಂದು ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪನ್ಸೇರಿಯಾ ಮಾಹಿತಿ ನೀಡಿದ್ದಾರೆ.
'ಸೋಮವಾರದವರೆಗೆ 184 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 35 ಪ್ರಕರಣಗಳು ದೃಢಪಟ್ಟಿವೆ. 11 ಮಾದರಿಯ ಪರೀಕ್ಷಾ ವರದಿ ಬಂದಿಲ್ಲ. 6 ಮಕ್ಕಳು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ' ಎಂದು ತಿಳಿಸಿದ್ದಾರೆ.
ಶಂಕಿತ ಪ್ರಕರಣಗಳೆಲ್ಲ ಚಂಡೀಪುರ ವೈರಸ್ ಅಲ್ಲ
ಸದ್ಯದ ಪರಿಸ್ಥಿತಿಯ ಕುರಿತು ಮಾತನಾಡಿದ ಆರೋಗ್ಯ ಸಚಿವರು, 'ವರದಿಯಾಗುತ್ತಿರುವ ಎಲ್ಲಾ ಶಂಕಿತ ಪ್ರಕರಣಗಳನ್ನೂ ಚಂಡೀಪುರ ಸೋಂಕು ಎಂದು ಭಾವಿಸಬೇಡಿ. ಈ ಪ್ರಕರಣಗಳು ಗುಜರಾತ್‌ನ ವಿವಿಧ ಭಾಗಗಳಿಂದ ವರದಿಯಾಗಿದ್ದು, ಯಾವುದೋ ಒಂದು ಗ್ರಾಮ ಅಥವಾ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗಳ ಸಜ್ಜುಗೊಳಿಸುವಿಕೆ ಮತ್ತು ನಿಗಾ
ಗಾಂಧಿನಗರ, ಸಬರಕಾಂತ-ಹಿಮ್ಮತ್‌ನಗರ, ಪಟಾನ್, ರಾಜ್‌ಕೋಟ್ ಮತ್ತು ಭಾವನಗರದ ಸಿವಿಲ್ ಆಸ್ಪತ್ರೆಗಳಿಗೆ ದಾಖಲಾಗಿರುವ ಎಲ್ಲಾ ಮಕ್ಕಳಿಗೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಂಡೀಪುರ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯವಿರುವ ಐಸಿಯುಗೆ ತಕ್ಷಣವೇ ದಾಖಲಿಸಿಕೊಳ್ಳುವಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಮಕ್ಕಳ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
ಮಣ್ಣಿನ ಮನೆಗಳ ಬಿರುಕು ಮುಚ್ಚಲು ಸೂಚನೆ
ಚಂಡೀಪುರ ವೈರಸ್ ಮುಖ್ಯವಾಗಿ ಮರಳುನೊಣಗಳ (ಸ್ಯಾಂಡ್‌ಫ್ಲೈ) ಕಡಿತದಿಂದ ಹರಡುವುದರಿಂದ, ಕೀಟ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಕೆಳಗಿನಂತೆ ಸಲಹೆ ನೀಡಿದೆ...
ಮರಳು ನೊಣಗಳು ವಾಸಿಸುವ ಮಣ್ಣಿನ ಮನೆಗಳು ಮತ್ತು ಮಣ್ಣಿನ ಗೋಡೆಗಳ ಬಿರುಕುಗಳನ್ನು ಮುಚ್ಚಬೇಕು.
ಗ್ರಾಮಗಳಲ್ಲಿ, ಮುಖ್ಯವಾಗಿ ಜಾನುವಾರುಗಳನ್ನು ಸಾಕುವ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡಣೆಗೆ ಸಹಕರಿಸಬೇಕು.
ಜಾಗೃತಿ ಮತ್ತು ಸಮೀಕ್ಷೆ ನಡೆಸುವ ಆರೋಗ್ಯ ಅಧಿಕಾರಿಗಳ ತಂಡಗಳೊಂದಿಗೆ ಸಹಕರಿಸಬೇಕು.
ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ
ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಮತ್ತು ಔಷಧಗಳು ಇಲ್ಲ. ಸೋಂಕಿನ ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ಪುನರುಚ್ಚರಿಸಿದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮತ್ತು ಆಸ್ಪತ್ರೆಗೆ ದಾಖಲಿಸುವುದೇ ಸದ್ಯಕ್ಕಿರುವ ಏಕೈಕ ಮಾರ್ಗವಾಗಿದೆ.
ಸೋಂಕಿನ ಲಕ್ಷಣಗಳು
ವಿಪರೀತ ಜ್ವರ
ವಾಂತಿ
ಮೂರ್ಛೆ ತಪ್ಪುವುದು
ಅತಿಯಾದ ತೂಕಡಿಕೆ/ಮಂಪರು
ಮಗುವಿನ ವರ್ತನೆಯಲ್ಲಿ ದಿಢೀರ್ ಬದಲಾವಣೆ
ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯುವಂತೆ ಆರೋಗ್ಯ ಇಲಾಖೆ ಪೋಷಕರಲ್ಲಿ ಮನವಿ ಮಾಡಿದೆ.
ವದಂತಿಗಳನ್ನು ಹರಡದಂತೆ ಮನವಿ
ಸಾವಿನ ಸಂಖ್ಯೆ ಕಳವಳ ಮೂಡಿಸಿದ್ದರೂ, ವದಂತಿ ಹರಡದಂತೆ ಗುಜರಾತ್ ಸರ್ಕಾರ ನಾಗರಿಕರಲ್ಲಿ ಮನವಿ ಮಾಡಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡೀಪುರ ವೆಸಿಕ್ಯೊಲೊವೈರಸ್ (ಸಿಎಚ್‌ಪಿವಿ) ಈ ವರ್ಷ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ. 2024ರಲ್ಲಿ 14 ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದರು.
ಆಧಾರ: ದಿ ಹಿಂದೂ, ಇಂಡಿಯಾ ಟಿವಿ

