ಕಾಸರಗೋಡು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 'ರಾಷ್ಟ್ರ ಸ್ವಾಭಿಮಾನ ಸಮಿತಿ'ಯ ನೇತೃತ್ವದಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 10ಕ್ಕೆ ಕುಂಬಳೆ ನಗರದಲ್ಲಿ ಜಿಲ್ಲಾ ಮಟ್ಟದ ತಿರಂಗಾ ಯಾತ್ರೆಯನ್ನು ಆಯೋಜಿಸಲಾಗಿದೆ.
ಹೋಲಿ ಫ್ಯಾಮಿಲಿ ಶಾಲೆಯ ಆವರಣದಿಂದ ಆರಂಭವಾಗಲಿರುವ ಈ ತಿರಂಗಾ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ. ಕೆ. ಕೃಷ್ಣದಾಸ್ ಯಾತ್ರೆ ಉದ್ಘಾಟಿಸುವರು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಧರಿಸಿ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಅತ್ಯುತ್ತಮ ವೇಷಧರಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

