ನವದೆಹಲಿ (PTI): 'ತಪ್ಪು ದಾರಿ ಹಿಡಿದ ಕೆಲವು ಘಾತುಕರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದರೂ ಪೊಲೀಸರು ಯುವಜನರನ್ನು ಶಾಂತಗೊಳಿಸಿ ತಿಳಿವಳಿಕೆ ಹೇಳಬೇಕಿದೆ. ಇಂಥವರ ಜೊತೆ ರಾಜ್ಯವು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸಿದರೆ, ಪರಿಸ್ಥಿತಿಯು ವಿಕೋಪಕ್ಕೆ ತಿರುಗುತ್ತದೆ.
ಇದು ಇನ್ನಷ್ಟು ಹಿಂಸೆಯನ್ನು ಉಂಟು ಮಾಡಬಹುದು. ಈ ಪರಿಸ್ಥಿತಿ ಎದುರಾಗದಂತೆ ಪ್ರತಿಭಟನೆಗಳ ವೇಳೆ ಪೊಲೀಸರು ಸಂಯಮದಿಂದ ವರ್ತಿಸಬೇಕು...'
'ಜುಲೈ 20ರಂದು 'ಸಂಸತ್ ಚಲೊ'ಗೆ ಕರೆ ನೀಡಿದ್ದೇ ಹಿಂಸಾಚಾರವಾಗಲು ಕಾರಣ. ಆದ್ದರಿಂದ ಪ್ರತಿಭಟನೆಯ ಆಯೋಜಕರ (ಸಿಜೆಪಿ) ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ವಾಯು ಸೇನೆಯ ನಿವೃತ್ತ ಅಧಿಕಾರಿ ಮನೀಷ್ ಕುಮಾರ್ ಸೋಲಂಕಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಈ ರೀತಿ ಅಭಿಪ್ರಾಯಪಟ್ಟರು.
ಸಿಜೆಐ, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಇನ್ನೊಂದು ಅರ್ಜಿಯ ಜೊತೆಯಲ್ಲಿ ಈ ಅರ್ಜಿಯನ್ನು ಸೇರಿಸಿ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.
'15 ದಿನಗಳು ಕಳೆದಿವೆ. ಆಯೋಜಕರ ಹೊಣೆಗಾರಿಕೆಯ ಕತೆ ಏನು? ಅವರಂತೂ ಒಂದಾದ ಮೇಲೆ ಒಂದು ಸುದ್ದಿವಾಹಿನಿಯಲ್ಲಿ ಕುಳಿತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಂದಲೇ ಉಂಟಾದ ಪರಿಸ್ಥಿತಿಯನ್ನು ತಣಿಸುವ ಯಾವುದೇ ಕೆಲಸವನ್ನೂ ಅವರು ಮಾಡುತ್ತಿಲ್ಲ' ಎಂದು ಮನೀಷ್ ಅವರ ಪರ ವಕೀಲ ರಿಜ್ವಾನ್ ಅಹಮದ್ ವಾದಿಸಿದರು.
'ಒಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಅಲ್ಲಿ ಪೆಂಡಾಲ್‌ಗೆ ಬೆಂಕಿ ಬಿದ್ದರೂ ನೈಸರ್ಗಿಕ ವಿಕೋಪಕ್ಕೆ ಒಳಗಾದರೂ ಕಾಲ್ತುಳಿತವಾದರೂ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಸರ್ಕಾರವು ಒಂದು ಹೆಜ್ಜೆ ಹಿಂದೆ ಇರಿಸಿದೆ. ಆದರೆ, ಸಮಾಜ ಅಥವಾ ನ್ಯಾಯಾಂಗವು ಹೀಗೆ ಮಾಡಲು ಸಾಧ್ಯವಿಲ್ಲ' ಎಂದರು.
ಯುವಕರು ಗುಂಡು ಹಾರಿಸಿದ್ದರೆ?
-ಸಂಸತ್ತು ಎನ್ನುವುದು ಪ್ರಜಾಪ್ರಭುತ್ವದ ದೇವಸ್ಥಾನ ಇದ್ದಂತೆ. ಒಂದು ವೇಳೆ ಅಲ್ಲಿಗೆ 500 ಜನರು ನುಗ್ಗಿದ್ದರೆ? ಅವರ ಬಳಿ ನಾಡ ಬಂದೂಕು ಇತ್ತೋ ಏನೋ? ಯಾರು ಬಲ್ಲವರು? ಅವರೇನಾದರೂ ಗುಂಡು ಹಾರಿಸಿದ್ದರೆ?
- ಮೂರು ವರ್ಷದ ಹಿಂದೆ ರೈತರು ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಶಾಹೀನ್‌ಬಾಗ್‌ನಲ್ಲಿಯೂ ಪ್ರತಿಭಟನೆ ನಡೆದಿತ್ತು. ಮುಂದೊಂದು ದಿನ ಆಲ್ಫಾ, ಬೀಟಾ, ಡೆಲ್ಟಾ ಪೀಳಿಗೆಯವರು ಪ್ರತಿಭಟನೆ ನಡೆಸುತ್ತಾರೆ
- ಸಿಜೆಪಿ ಒಂದು ನೋಂದಾಯಿತ ಸಂಸ್ಥೆ ಅಲ್ಲ. ಆದ್ದರಿಂದ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಅವರಿಗೆ ಅನುಮತಿ ನೀಡಲಾಗಿಲ್ಲ. ಜೊತೆಗೆ, ಆಯೋಜಕರಿಗೆ 22 ಷರತ್ತು ವಿಧಿಸಲಾಗಿತ್ತು. ಈ ಎಲ್ಲವನ್ನೂ ಅವರು ಉಲ್ಲಂಘಿಸಿದ್ದರು
- ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕುರಿತು ಅವಮಾನಕರ ಭಾಷೆ ಬಳಸಿದವರನ್ನು ಗುರುತಿಸಲು ನಿರ್ದೇಶನ ನೀಡಿ. ಅಂಥವರಿಗೆ ಸಮಾಜ ಸೇವೆ ಮಾಡಲು ಹೇಳಿ.
'ಯುವಕರ ಮಾತು ಕೇಳಿಸಿಕೊಳ್ಳಬೇಕು'
ಯುವಕರು ಹಿಂಸಾಚಾರದಲ್ಲಿ ಭಾಗಿಯಾಗದಂತೆ ನಾವು ಜಾಗರೂಕರಾಗಿ ಹೆಜ್ಜೆ ಇರಿಸಬೇಕು. ಅವರೊಂದಿಗೆ ಸಮಾಲೋಚನೆ ನಡೆಸುವುದು ಮತ್ತು ಅವರನ್ನು ಶಾಂತವಾಗಿಸುವುದು ಉತ್ತಮ ದಾರಿ. ಇದಕ್ಕಿಂತಲೂ ಉತ್ತಮವಾದುದು ಕೇಳಿಸಿಕೊಳ್ಳುವುದು. ಯುವಕರ ಮಾತನ್ನು ಕೇಳಿಸಿಕೊಳ್ಳಬೇಕು ಮತ್ತು ಅವರು ಯಾಕೆ ಘೋಷಣೆ ಕೂಗುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು
ಸೂರ್ಯಕಾಂತ್, ಸಿಜೆಐ

