ಛತ್ರಪತಿ ಸಂಭಾಜಿನಗರ (PTI) ): 'ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ಸದ್ಯಕ್ಕೆ ಜನರ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಗುಂಪಾಗಿ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಭಾರತಕ್ಕೆ ಇಂಥದ್ದೇ ಗುಂಪಿನ ಅವಶ್ಯಕತೆ ಇದೆ' ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬುಧವಾರ ಹೇಳಿದರು.
ಸಿಜೆಪಿ ತಂಡದ ಸಭೆಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬುಧವಾರ ನಡೆಯಿತು. ಸಭೆಗೂ ಮುನ್ನ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
'ನ್ಯಾಯಾಂಗ, ರಾಜಕಾರಣ, ಮಾಧ್ಯಮ, ಚುನಾವಣಾ ಆಯೋಗದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ನಮ್ಮ ಹೋರಾಟವು ತೀವ್ರಗೊಳ್ಳುತ್ತಿದ್ದಂತೆಯೇ ಶಿಕ್ಷಣದ ವಿಚಾರಕ್ಕೆ ಮಾತ್ರವೇ ದೇಶದಾದ್ಯಂತ ಬೆಂಬಲ ವ್ಯಕ್ತವಾಗಲಿಲ್ಲ. ಬದಲಿಗೆ ಅದು ಈ ಸಂಸ್ಥೆಗಳ ಕಾರ್ಯವೈಖರಿ ಕುರಿತೂ ಬೆಂಬಲ ದೊರೆಯಿತು. ಇವುಗಳು ಜವಾಬ್ದಾರಿಯಿಂದ ಇರುವಂತೆ ಒತ್ತಡ ಹೇರಲು ನಮ್ಮಂಥ ಗುಂಪುಗಳು ಸೃಷ್ಟಿಯಾಗಬೇಕಿದೆ' ಎಂದರು.
'ದೇಶದಲ್ಲಿ ರಾಜಕೀಯ ಪಕ್ಷಗಳ ಸ್ಥಿತಿ ಬಹಳ ಕೆಟ್ಟದಾಗಿ ಇದೆ. ಜನರು ಒಬ್ಬರಿಗೆ ಮತ ಹಾಕಿದರೆ, ಸಂಜೆ ಹೊತ್ತಿಗೆ ಮತ್ತೊಬ್ಬರು ಸರ್ಕಾರ ರಚಿಸುತ್ತಾರೆ. ಆದ್ದರಿಂದ, ಸಿಜೆಪಿಯು ಒತ್ತಡ ಹೇರುವ ಗುಂಪಾಗಿಯೇ ಇರಲಿದೆ. ನಾವು ರಾಜಕೀಯಕ್ಕೆ ಬರುವ ಬಗ್ಗೆ ನಮಗಿಂತ ಮಾಧ್ಯಮದವರೇ ಹೆಚ್ಚು ಉತ್ಸುಕರಾಗಿದ್ದಾರೆ' ಎಂದೂ ಕುಟುಕಿದರು.
'ಒತ್ತಡ ಹೇರುತ್ತೇವೆ'
ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್‌ಐಆರ್ ಅನ್ನು ವಾಪಸು ತೆಗೆದುಕೊಳ್ಳುವ ಬಗ್ಗೆ ನಾವು ಇನ್ನಷ್ಟು ಒತ್ತಡ ಹೇರಲಿದ್ದೇವೆ. ಸರ್ಕಾರದ ಪ್ರತಿನಿಧಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ
ಸೌರವ್ ದಾಸ್, ಸಿಜೆಪಿ ವಕ್ತಾರ
ಸೊನಮ್ ಮನವಿ- ನೀರು ಕುಡಿದ ವಿದ್ಯಾರ್ಥಿ
ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾದ ಸದಸ್ಯ ದೇವೇಂದ್ರ ನಾಥ್ ಮಹಾತೊ ಅವರ ಉಪವಾಸವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ದೇವೇಂದ್ರ ಅವರಿಗೆ ಬುಧವಾರ ಕರೆ ಮಾಡಿ, ನೀರು ಕುಡಿಯುವಂತೆ ಒತ್ತಾಯಿಸಿದರು.
ಸೊನಮ್ ಅವರ ಮನವಿಯನ್ನು ಪುರಸ್ಕರಿಸಿರುವ ದೇವೇಂದ್ರ ಅವರು ನೀರು ಕುಡಿದರು. 'ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಸುಧಾರಣೆಗಳ ಮಂಚ್' ಅಡಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ರಾತ್ರಿಯಿಂದ ಇನ್ನೂ ಐವರು ವಿದ್ಯಾರ್ಥಿಗಳು ಉಪವಾಸ ಆರಂಭಿಸಿದ್ದಾರೆ.
'ರಾಷ್ಟ್ರೀಯ ಸಮಸ್ಯೆ': 'ಪ್ರಶ್ನೆಪತ್ರಿಕೆ ಸೋರಿಕೆಯು ಜಾರ್ಖಂಡ್‌ಗೆ ಸೀಮಿತವಾದ ವಿಚಾರವಲ್ಲ. ವಿವಿಧ ರಾಜ್ಯಗಳಲ್ಲಿಯೂ ಈ ಸಮಸ್ಯೆ ಇದೆ. ಆದ್ದರಿಂದ ಇದೊಂದು ರಾಷ್ಟ್ರೀಯ ಸಮಸ್ಯೆ. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದ್ದೇವೆ. ಸರ್ಕಾರ ಬಾಗಿಲು ತೆರೆದಿದೆ. ವಿದ್ಯಾರ್ಥಿಗಳು, ಅಭ್ಯರ್ಥಿಗಳು ಯಾರೇ ಬಂದು ಸಲಹೆ ನೀಡಬಹುದು, ಬೇಡಿಕೆಯನ್ನೂ ಮಂಡಿಸಬಹುದು' ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾವು ಖಂಡಿತವಾಗಿಯೂ ಜಾರ್ಖಂಡ್‌ಗೆ ಹೋಗುತ್ತೇವೆ. ನಾವು ಅವರೊಂದಿಗೆ ನಿಂತುಕೊಳ್ಳುತ್ತೇವೆ ಮತ್ತು ಅವರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ
ಅಭಿಜಿತ್ ದೀಪ್ಕೆ, ಸಿಜೆಪಿ ಸಂಸ್ಥಾಪಕ

