ಚಂಡಿಗಡ: ಪಂಜಾಬಿನ ರೈತರು ಖನೌರಿ-ಡಾಟಾ ಸಿಂಗ್‌ವಾಲಾ ಗಡಿಯಿಂದ ದಿಲ್ಲಿಯ ಜಂತರ್ ಮಂತರ್‌ವರೆಗೆ ಹಮ್ಮಿಕೊಂಡಿರುವ 228 ಕಿ.ಮೀ.ಉದ್ದದ 'ಕಿಸಾನ್ ಬಚಾವೋ ಪಾದಯಾತ್ರೆ'ಯನ್ನು ತಡೆಯಲು ಹರ್ಯಾಣ ಪೊಲೀಸರು ಶನಿವಾರ ಖನೌರಿ ಬಳಿಯ ಪಂಜಾಬ್-ಹರ್ಯಾಣ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ.
ಭಾರತ-ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾದ ಈ ಪಾದಯಾತ್ರೆಯು ಆ.29ರಂದು ದಿಲ್ಲಿ ತಲುಪುವ ವೇಳಾಪಟ್ಟಿಯನ್ನು ರೂಪಿಸಲಾಗಿತ್ತು.
ಪಂಜಾಬ್ ಕಡೆಯಲ್ಲಿ ನೂರಾರು ರೈತರು ಜಮಾಯಿಸುತ್ತಿದ್ದಂತೆ ಗಡಿಯಲ್ಲಿ ಐದು ಹಂತಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹರ್ಯಾಣದ ಜಿಂದ್ ಮತ್ತು ಪಂಜಾಬಿನ ಸಂಗ್ರೂರ್ ನಡುವಿನ ಖನೌರಿ ಗಡಿಯು ಪ್ರಸ್ತುತ ಉದ್ವಿಗ್ನತೆಯ ಕೇಂದ್ರಬಿಂದುವಾಗಿದ್ದು, ಪಂಜಾಬಿನ ರೈತರು ಹರ್ಯಾಣ ಪ್ರವೇಶಿಸುವುದನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ರೈತ ಸಂಘಟನೆಗಳು ಪಾದಯಾತ್ರೆ ನಡೆಸಲು ಅನುಮತಿಯನ್ನು ಪಡೆದುಕೊಂಡಿಲ್ಲ, ಹೀಗಾಗಿ ರೈತರು ಹರ್ಯಾಣ ಪ್ರವೇಶಿಸಿ ದಿಲ್ಲಿಯತ್ತ ಸಾಗಲು ಅವಕಾಶ ನೀಡುವುದಿಲ್ಲ ಎಂದು ಜಿಂದ್ ಎಸ್‌ಪಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಜಗಜಿತ್ ಸಿಂಗ್ ದಲ್ಲೇವಾಲ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯು 'ಕಿಸಾನ್ ಬಚಾವೋ ಪಾದಯಾತ್ರೆ'ಯನ್ನು ಘೋಷಿಸಿದೆ.

