ನವದೆಹಲಿ: ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡಿ ಅವರ ಪತ್ನಿ ಕ್ಯಾಮಿ ಕ್ಲಾರ್ಕ್ ಅವರು ತಮ್ಮ ವಯಸ್ಕರ ಚಿತ್ರಗಳ ಕಂಪೆನಿಗೆ ಹೂಡಿಕೆ ಮಾಡುವಂತೆ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಕೇಳಿದ್ದರು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಎಪ್ಸ್ಟೀನ್ ಫೈಲ್ ಗಳಲ್ಲಿರುವ ಇ-ಮೇಲ್‌ಗಳನ್ನೂ ವರದಿ ಆಧರಿಸಿದೆ.
2011ರ ಮಾರ್ಚ್‌ನಲ್ಲಿ ಏಜೆಂಟ್ ಜಾನ್ ಬ್ರಾಕ್‌ಮನ್ ಮೂಲಕ ಕ್ಯಾಮಿ ಕ್ಲಾರ್ಕ್ ಅವರು ಜೆಫ್ರಿ ಎಪ್ಸ್ಟೀನ್‌ಗೆ ಪರಿಚಿತರಾದರು. 2008ರಲ್ಲೇ ಎಪ್ಸ್ಟೀನ್ ಲೈಂಗಿಕ ಅಪರಾಧ ಮತ್ತು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದನು.
ಬ್ರಾಕ್‌ಮನ್ ಅವರ ಪರಿಚಯದ ಬಳಿಕ ಕ್ಲಾರ್ಕ್ ಮತ್ತು ಕ್ಯಾಪೊಸೆಫಾಲೊ ಅವರು ಎಪ್ಸ್ಟೀನ್ ನನ್ನು ಭೇಟಿಯಾದರು. ಈ ಭೇಟಿಯು ಭೋಜನದ ಸಂದರ್ಭದಲ್ಲಿ ನಡೆದಿತ್ತು. ಬಳಿಕ ಕ್ಲಾರ್ಕ್ ಅವರು ಎಪ್ಸ್ಟೀನ್ ಗೆ ಇ-ಮೇಲ್ ಕಳುಹಿಸಿ, ಆತನನ್ನು ಭೇಟಿಯಾಗಿದ್ದು ಸಂತಸ ತಂದಿದೆ ಎಂದು ತಿಳಿಸಿದ್ದರು.
ಭೋಜನದ ಮರುದಿನ ಕ್ಲಾರ್ಕ್ ಅವರು ಎಪ್ಸ್ಟೀನ್ ಗೆ ಇ-ಮೇಲ್ ಕಳುಹಿಸಿದರು. ತಮ್ಮ ಕಂಪೆನಿಗೆ ಬೇಕಿರುವ ಹಣಕಾಸಿನ ನೆರವಿನ ಬಗ್ಗೆ ಅದರಲ್ಲಿ ವಿವರಿಸಿದ್ದರು. 'ನಿನ್ನೆ ರಾತ್ರಿ ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತಸವಾಯಿತು' ಎಂದೂ ಅವರು ಬರೆದಿದ್ದರು.
ಕೆಲವು ದಿನಗಳ ಬಳಿಕ ಕ್ಲಾರ್ಕ್ ಅವರು ತಮ್ಮ ಕಂಪೆನಿ ನಿರ್ಮಿಸಲು ಉದ್ದೇಶಿಸಿದ್ದ ಮೊದಲ ನಾಲ್ಕು ಚಿತ್ರಗಳ ಸ್ಕ್ರಿಪ್ಟ್ ಮತ್ತು ಕಥಾ ರೂಪರೇಖೆಯನ್ನು ಎಪ್ಸ್ಟೀನ್‌ಗೆ ಕಳುಹಿಸಿದರು. ಅವುಗಳಲ್ಲಿ 'ಅಮೆರಿಕನ್ ಗರ್ಲ್ ಇನ್ ಪ್ಯಾರಿಸ್' ಚಿತ್ರವೂ ಸೇರಿತ್ತು. ಈ ಚಿತ್ರಗಳ ವಿಷಯ ವಯಸ್ಕರಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಲು ಇ-ಮೇಲ್‌ನಲ್ಲಿ 'ಸ್ವಲ್ಪ NSFW' ಎಂದು ನಮೂದಿಸಿದ್ದರು. NSFW ಎಂದರೆ ಕಚೇರಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ವೀಕ್ಷಿಸಲು ಸೂಕ್ತವಲ್ಲದ ವಿಷಯ ಎಂದರ್ಥ.
ಹೂಡಿಕೆಗೆ ಕೇಳಿಕೆ
2012ರ ಮಾರ್ಚ್‌ನಲ್ಲಿ ಕ್ಲಾರ್ಕ್ ಅವರು ಎಪ್ಸ್ಟೀನ್‌ಗೆ ಇ-ಮೇಲ್ ಕಳುಹಿಸಿ, ತಮ್ಮ ವ್ಯವಹಾರಕ್ಕೆ ಹಣ ಹೂಡಲು ಆಸಕ್ತಿ ಇದೆಯೇ ಎಂದು ಕೇಳಿದ್ದರು. ಆದರೆ ಎಪ್ಸ್ಟೀನ್ ಈ ವ್ಯವಹಾರಕ್ಕೆ ಹಣ ನೀಡಿದ ಬಗ್ಗೆ ಯಾವುದೇ ದಾಖಲೆ ಇಲ್ಲ. ಮತ್ತೊಂದು ಇ-ಮೇಲ್ ನಲ್ಲಿ ಎಪ್ಸ್ಟೀನ್ ಅವರು ಆ ವ್ಯವಹಾರದ ಕುರಿತು 'ಟಿವಿ ಸೆಕ್ಸ್ ಮಾಡಲು ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದ್ದರು ಎಂದು ವರದಿ ತಿಳಿಸಿದೆ.
2012ರ ಜುಲೈನಲ್ಲಿ ಕ್ಲಾರ್ಕ್ ಅವರು ಎಪ್ಸ್ಟೀನ್ ನನ್ನು ತಮ್ಮ ಗೃಹಪ್ರವೇಶ ಸಮಾರಂಭಕ್ಕೆ ಆಹ್ವಾನಿಸಿದ್ದರು. ಆದರೆ ಇದಾದ ಬಳಿಕ ಇಬ್ಬರೂ ಮತ್ತೆ ಭೇಟಿಯಾಗಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಸಿಕ್ಕಿಲ್ಲ.
ಕ್ಯಾಮಿ ಕ್ಲಾರ್ಕ್ ಯಾರು?
ಕ್ಯಾಮಿ ಕ್ಲಾರ್ಕ್ ಅವರು ಆಂಥ್ರೊಪಿಕ್ ಕಂಪೆನಿಯ ಉದ್ಯೋಗಿಯಲ್ಲ. ಆದರೆ ಕಂಪೆನಿಯ ಸಿಇಒ ಆಗಿರುವ ತಮ್ಮ ಪತಿ ಡೇರಿಯೊ ಅಮೋಡಿ ಅವರಿಗೆ ಪ್ರಮುಖ ಸಲಹೆಗಳನ್ನು ನೀಡುತ್ತಾರೆ. ಅಮೋಡಿ ಅವರು ಕಂಪೆನಿಯ ಪ್ರಮುಖ ನಿರ್ಧಾರಗಳ ಕುರಿತು ಕ್ಲಾರ್ಕ್ ಅವರೊಂದಿಗೆ ಚರ್ಚಿಸುತ್ತಾರೆ ಎಂದು ವರದಿ ಹೇಳಿದೆ. ಹೀಗಾಗಿ, ಆಂಥ್ರೊಪಿಕ್‌ನಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ ಕ್ಲಾರ್ಕ್ ಅವರು ಅಮೋಡಿ ಮೇಲೆ ಪ್ರಭಾವ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಅಮೋಡಿ ಅವರು ದಾವೋಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗ ಕ್ಲಾರ್ಕ್ ಕೂಡ ಅವರೊಂದಿಗೆ ಹಾಜರಿರುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ಕ್ಲಾರ್ಕ್ ಅವರು ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಾರೆ. ಸನ್ ವ್ಯಾಲಿಯಲ್ಲಿ ನಡೆಯುವ ಅಲೆನ್ & ಕಂ. ಸಮ್ಮೇಳನದಲ್ಲಿಯೂ ಅವರು ಹೂಡಿಕೆದಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ವರ್ಷ ಅಮೋಡಿ ಅವರು ಭಾರತಕ್ಕೆ ಬಂದಾಗ ತಮ್ಮ ಪತ್ನಿ ಕ್ಯಾಮಿ ಕ್ಲಾರ್ಕ್ ಅವರನ್ನೂ ಜತೆಗೆ ಕರೆತಂದಿದ್ದರು. ಹೊಸದಿಲ್ಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಗೆ ಪ್ರತಿಯೊಬ್ಬ ಕಂಪೆನಿ ಮುಖ್ಯಸ್ಥರಿಗೂ ತಮ್ಮೊಂದಿಗೆ ಮತ್ತೊಬ್ಬರನ್ನು ಕರೆತರಲು ಅವಕಾಶ ನೀಡಲಾಗಿತ್ತು. ಇತರ ಕಂಪೆನಿ ಮುಖ್ಯಸ್ಥರು ಸಾಮಾನ್ಯವಾಗಿ ತಮ್ಮ ಸಹೋದ್ಯೋಗಿಗಳನ್ನು ಕರೆತಂದಿದ್ದರೆ, ಅಮೋಡಿ ಅವರು ತಮ್ಮ ಪತ್ನಿಯನ್ನು ಜತೆಗೆ ಕರೆತಂದಿದ್ದರು.
ಅಮೋಡಿ-ಸ್ಮಿತ್ ಪರಿಚಯ
1979ರಲ್ಲಿ ಅಮೆರಿಕದ ನೆವಾಡಾದಲ್ಲಿ ಜನಿಸಿದ ಕ್ಲಾರ್ಕ್ ಅವರು 2014ರಲ್ಲಿ ಗೂಗಲ್ ನ ಮಾಜಿ ಮುಖ್ಯಸ್ಥ ಎರಿಕ್ ಸ್ಮಿತ್ ಅವರೊಂದಿಗೆ ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. 2022ರಲ್ಲಿ ಅವರು ಅಮೋಡಿ ಅವರನ್ನು ವಿವಾಹವಾದರು.
2016ರಲ್ಲಿ ಡೇರಿಯೊ ಅಮೋಡಿ ಓಪನ್‌ಎಐಗೆ ಸೇರಿದ ಸಂದರ್ಭದಲ್ಲಿ ಕ್ಯಾಮಿ ಕ್ಲಾರ್ಕ್ ಅವರ ಕಾರ್ಯತಂತ್ರದ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಕ್ಲಾರ್ಕ್ ಅವರು ಅಮೋಡಿ ಅವರನ್ನು ಗೂಗಲ್ ನ ಮಾಜಿ ಮುಖ್ಯಸ್ಥ ಎರಿಕ್ ಸ್ಮಿತ್‌ಗೆ ಪರಿಚಯಿಸಿದರು.
2018ರಲ್ಲಿ ಅಮೋಡಿ ಮತ್ತು ಎರಿಕ್ ಸ್ಮಿತ್ ಭೇಟಿಯಾದರು. ಅಮೋಡಿ ಅವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಸ್ಮಿತ್ ಅವರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಈ ಭೇಟಿಯಲ್ಲಿ ಅಮೋಡಿ ಅವರು ಕೃತಕ ಬುದ್ಧಿಮತ್ತೆ ಕುರಿತು ತಮ್ಮ ಆಲೋಚನೆಗಳನ್ನು ಸ್ಮಿತ್ ಅವರೊಂದಿಗೆ ಹಂಚಿಕೊಂಡಿದ್ದರು. ಅಮೋಡಿ ಅವರ ಆಲೋಚನೆಗಳಿಂದ ಸ್ಮಿತ್ ಪ್ರಭಾವಿತರಾಗಿದ್ದರು ಎಂದು ವರದಿ ತಿಳಿಸಿದೆ.
2020ರ ಕೊನೆಯಲ್ಲಿ ಡೇರಿಯೊ ಅಮೋಡಿ, ಅವರ ಸಹೋದರಿ ಡೇನಿಯೆಲಾ ಮತ್ತು ಹಲವು ಸಹೋದ್ಯೋಗಿಗಳು ಓಪನ್‌ಎಐ ತೊರೆದರು. ಬಳಿಕ ಅವರು ಸೇರಿ ಆಂಥ್ರೊಪಿಕ್ ಕಂಪೆನಿಯನ್ನು ಸ್ಥಾಪಿಸಿದರು. ಎರಿಕ್ ಸ್ಮಿತ್ ಆಂಥ್ರೊಪಿಕ್‌ನ ಆರಂಭಿಕ ಹಂತದಲ್ಲೇ ಕಂಪೆನಿಗೆ ಬೆಂಬಲ ನೀಡಿದರು. 2021ರ ಮೇನಲ್ಲಿ ಆಂಥ್ರೊಪಿಕ್ ಘೋಷಿಸಿದ 124 ಮಿಲಿಯನ್ ಡಾಲರ್ ಸರಣಿ-ಎ ಹೂಡಿಕೆಯಲ್ಲೂ ಸ್ಮಿತ್ ಭಾಗವಹಿಸಿದ್ದರು.
ಕ್ಲಾರ್ಕ್ ಅವರು ತಮ್ಮ ವ್ಯವಹಾರಕ್ಕೆ ಹೂಡಿಕೆ ಮಾಡುವಂತೆ ಎಪ್ಸ್ಟೀನ್ ನನ್ನು ಕೇಳಿದ್ದರು. ಇದಕ್ಕೆ ಸಂಬಂಧಿಸಿದ ಇ-ಮೇಲ್ ಗಳ ದಾಖಲೆಗಳಿವೆ. ಆದರೆ ಎಪ್ಸ್ಟೀನ್ ಆ ವ್ಯವಹಾರಕ್ಕೆ ಹಣ ನೀಡಿದ್ದನೇ ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

