ಕ್ವೆಟಾ: ಆಗಸ್ಟ್ 14 ರಂದು ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಹಕ್ಕುಗಳ ಸಂಘಟನೆಗಳು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು `ಕಪ್ಪು ದಿನ' ಎಂದು ಆಚರಿಸಿದ್ದು ಬಲೂಚಿಸ್ತಾನದಾದ್ಯಂತ ವ್ಯಾಪಕ ಹಿಂಸಾಚಾರ, ಸ್ಪೋಟಕ ದಾಳಿಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳು ಭುಗಿಲೆದ್ದಿರುವುದಾಗಿ ವರದಿಯಾಗಿದೆ.
ಪ್ರಾಂತದಾದ್ಯಂತ ಸರಕಾರಿ ಭದ್ರತಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸರಣಿ ಸಂಘಟಿತ ದಾಳಿಗಳು ನಡೆದಿದ್ದು, ವ್ಯಾಪಾರ-ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಸಾರ್ವಜನಿಕ ಪ್ರತಿಭಟನೆಗಳು ವರದಿಯಾಗಿವೆ.
ಹರ್ನಾಯಿ ಪ್ರದೇಶದಲ್ಲಿ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‍ಎ)ಗೆ ಸಂಯೋಜಿತರಾಗಿದ್ದಾರೆ ಎನ್ನಲಾದ ಶಸ್ತ್ರಸಜ್ಜಿತ ವ್ಯಕ್ತಿಗಳು 5-ಮೈಲ್ ಪೊಲೀಸ್ ಚೆಕ್‍ಪೋಸ್ಟ್ ಅನ್ನು ಸ್ಫೋಟಿಸಿದರು. ಈ ಸ್ಫೋಟದಲ್ಲಿ ಚೆಕ್‍ಪೋಸ್ಟ್ ಕಟ್ಟಡ ತೀವ್ರವಾಗಿ ಹಾನಿಗೊಳಗಾಗಿದೆ.
ತುರ್ಬತ್‍ನ ಶಹೀದ್ ಫಿದಾ ಚೌಕ್ ಬಳಿ ಗಡಿಭದ್ರತಾ ಪಡೆ ವಾಹನದ ಸಮೀಪ ತೀವ್ರ ಸ್ಫೋಟ ಸಂಭವಿಸಿದ ಬಳಿಕ ಭದ್ರತಾ ಪಡೆಗಳಿಂದ ಭಾರಿ ಗುಂಡಿನ ದಾಳಿ ನಡೆಯಿತು. ಇದರಿಂದ ಸುತ್ತಮುತ್ತಲಿನ ವಾಹನಗಳ ಕಿಟಕಿ ಗಾಜುಗಳು ನುಚ್ಚುನೂರಾಗಿದ್ದು, ಕನಿಷ್ಠ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಪ್ರಮುಖ ನಗರ ಕೇಂದ್ರಗಳಲ್ಲಿ ವ್ಯಾಪಾರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಹಲವಾರು ಜಿಲ್ಲೆಗಳಲ್ಲಿ ಬಲೂಚ್ ಮಹಿಳೆಯರು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಬಹಿರಂಗವಾಗಿ ಬೆಂಕಿಗಿಟ್ಟು ದಹಿಸಿದರು ಎಂದು ವರದಿಯಾಗಿದೆ.

