ದುಬೈ: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ ಜತೆಗಿನ ಎಲ್ಲ ಆರ್ಥಿಕ ಹಾಗೂ ವ್ಯಾಪಾರ ವಹಿವಾಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಧಗಿತಗೊಳಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ.
'ಪ್ರಾದೇಶಿಕ ಮಟ್ಟದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಇರಾನ್ ಜತೆಗಿನ ಎಲ್ಲ ವ್ಯಾಪಾರ, ವಾಣಿಜ್ಯ ವಿನಿಮಯ ಮತ್ತು ಹಣಕಾಸು ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ,' ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ನಿರ್ದೇಶಕಿ ಅಫ್ರಾ ಅಲ್ ಹಮೇಲಿ ಸ್ಪಷ್ಟಪಡಿಸಿದ್ದಾರೆ.
ಕೊಲ್ಲಿ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ಆರೋಪ:
ಕೊಲ್ಲಿ ಭಾಗದಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಎಇ ಆರೋಪಿಸಿದೆ. ಆದರೆ ಈ ಆರೋಪವನ್ನು ಇರಾನ್ ತಳ್ಳಿ ಹಾಕಿದೆ.
ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಮ್ಮ ರಕ್ಷಣಾ ವ್ಯವಸ್ಥೆಯು ಪತ್ತೆ ಹಚ್ಚಿದೆ. ಇದು ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರವನ್ನು ಗುರಿಯಾಗಿಸಿಕೊಂಡಿದ್ದವು. ಎರಡೂ ಕ್ಷಿಪಣಿಗಳು ಸಮುದ್ರದಲ್ಲಿ ಪತನಗೊಂಡಿರುವುದು ದೃಢಪಟ್ಟಿವೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಆದರೆ ಯುಎಇ ಆರೋಪವನ್ನು ಇರಾನ್ ತಳ್ಳಿ ಹಾಕಿದೆ. ಇಂತಹ ಆರೋಪಗಳು ಪ್ರಾದೇಶಿಕ ವಿಶ್ವಾಸ ಹಾಗೂ ಭದ್ರತಾ ಪ್ರಯತ್ನಗಳಿಗೆ ಧಕ್ಕೆಯಾಗುತ್ತದೆ ಎಂದು ಇರಾನ್ ವಿದೇಶಾಂಗ ವಕ್ತಾರ ಇಸ್ಮಾಯಿಲ್ ಬಕಾಯ್ ಹೇಳಿದ್ದಾರೆ.
ಫೆಬ್ರುವರಿ 28ರಂದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗ ಯುಎಇ ಭಾರಿ ದಾಳಿಗೆ ಈಡಾಗಿತ್ತು. ಈ ವೇಳೆ ಸುಮಾರು 3,000 ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುಎಇ ಮೇಲೆ ಪ್ರಯೋಗಿಸಲಾಗಿತ್ತು.

