ಡೆಹ್ರಾಡೂನ್ : ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಉತ್ತರದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ 'ಕಾಗೆ' ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಉತ್ತರಾಖಂಡದ ಸೋಬನ್ ಸಿಂಗ್ ಜೀನಾ ವಿಶ್ವವಿದ್ಯಾಲಯ ನಡೆಸಿದ ಬಿ.ಎಡ್ ಮತ್ತು ಎಂ.ಎಡ್ ಪ್ರವೇಶ ಪರೀಕ್ಷೆಯ 'ಕೀ ಉತ್ತರ'ದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ 'ಕಾಗೆ' ಎಂದು ನೀಡಲಾಗಿದೆ.
ಆಗಸ್ಟ್ 16 ರಂದು ಪ್ರವೇಶ ಪರೀಕ್ಷೆ ನಡೆದಿತ್ತು. ಒಟ್ಟು 5,352 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 200 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ಯಾವುದು? ಎಂಬ ಪ್ರಶ್ನೆಯೂ ಇತ್ತು.
ಪರೀಕ್ಷೆ ಮುಗಿದ ನಂತರ ವಿಶ್ವವಿದ್ಯಾಲಯದ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕೀ ಉತ್ತರಗಳಲ್ಲಿ 'ಸೆಟ್ ಎ' ಪ್ರಶ್ನೆಪತ್ರಿಕೆಯಲ್ಲಿ 'ನವಿಲು' ಎಂದು ಸರಿಯಾಗಿಯೇ ನೀಡಲಾಗಿತ್ತು. ಆದರೆ, 'ಸೆಟ್ ಬಿ, ಸಿ ಮತ್ತು ಡಿ' ಪ್ರಶ್ನೆಪತ್ರಿಕೆಗಳ ಕೀ ಉತ್ತರದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ 'ಕಾಗೆ' ಎಂದು ತಪ್ಪು ಉತ್ತರ ನೀಡಲಾಗಿತ್ತು.
ಇದನ್ನು ಗಮನಿಸಿದ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಪರೀಕ್ಷಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿಶ್ವವಿದ್ಯಾಲಯ ತನ್ನ ಪೋರ್ಟಲ್‌ನಲ್ಲಿ ಕೀ ಉತ್ತರವನ್ನು ತಕ್ಷಣವೇ ಅಳಿಸಿ ಹಾಕಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಸಚಿವ ಡಾ. ದೇವೇಂದ್ರ ಸಿಂಗ್ 'ಇದು ಕಂಪ್ಯೂಟರ್ ಸಂಬಂಧಿತ ತಾಂತ್ರಿಕ ದೋಷದಿಂದ ಸಂಭವಿಸಿದ ಎಡವಟ್ಟು' ಎಂದು ಹೇಳಿದ್ದಾರೆ.

