ಕಾಸರಗೋಡು: 'ಪ್ರಿಯದರ್ಶಿನಿ' ಯೋಜನೆಯಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯದ ಖಾಸಗಿ ಬಸ್ ವಲಯವನ್ನು ರಕ್ಷಿಸಲು ಸರ್ಕಾರದ ತುರ್ತು ಮಧ್ಯಪ್ರವೇಶದ ಅಗತ್ಯವಿದೆ ಎಂದು ಬಸ್ ಆಪರೇಟರ್ಸ್ ಫೆಡರೇಶನ್‍ನ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿಯು ಆಗ್ರಹಿಸಿದೆ.
ಇಂಧನ ಬೆಲೆ ಮತ್ತು ಬಿಡಿಭಾಗಗಳ ವೆಚ್ಚದಲ್ಲಿನ ಭಾರಿ ಏರಿಕೆ ಮತ್ತು ವಿಮಾ ಕಂತುಗಳ ಹೆಚ್ಚಳದಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದ ಬಸ್ ಮಾಲಿಕರಿಗೆ 'ಪ್ರಿಯದರ್ಶಿನಿ ಯೋಜನೆ'ಯ ಜಾರಿ ತೀವ್ರ ಹೊಡೆತ ನೀಡಿದೆ.
ಈ ಯೋಜನೆಯಿಂದಾಗಿ ಖಾಸಗಿ ಬಸ್‍ಗಳನ್ನು ಬಳಸುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಖಾಸಗಿ ಬಸ್ ವಲಯವು ಭಾರಿ ನಷ್ಟವನ್ನು ಎದುರಿಸುತ್ತಿರುವುದರಿಂದ, ಸಾವಿರಾರು ಬಸ್ ಸಿಬ್ಬಂದಿಯ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಸಾಂಪ್ರದಾಯಿಕವಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಖಾಸಗಿ ಬಸ್ ವಲಯವನ್ನು ಸರ್ಕಾರ ಅಧೀನಕ್ಕೆ ಪಡೆದುಕೊಂಡು ಯೋಜನೆ ಭಾಗವಾಗಿ ಬಳಸಿಕೊಳ್ಳುವ ನೀತಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಈ ಬೇಡಿಕೆ ಈಡೇರಿಸದಿದ್ದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ಸಭೆ ನಿರ್ಧರಿಸಿತು.
ಈ ಸಂಬಂಧ, ಸೆಪ್ಟೆಂಬರ್ 3 ರಂದು ಕಾಞಂಗಾಡ್‍ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಂಸದ, ಶಾಸಕ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಆರ್‍ಟಿಓ, ಜಂಟಿ ಆರ್‍ಟಿಒ, ನಗರಸಭಾ ಅಧ್ಯಕ್ಷರು, ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಯ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಎಲ್ಲಾ ಬಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಬೃಹತ್ ಸಮಾವೇಶವೊಂದನ್ನು ಆಯೋಜಿಸಲು ನಿರ್ಧರಿಸಿರುವುದಾಗಿ ಬಸ್ ಆಪರೇಟರ್ಸ್ ಫೆಡರೇಶನ್‍ನ ಕಾಸರಗೋಡು ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆ ತಿಳಿಸಿದೆ.

