ಸಿಂಗ್ರೌಲಿ: ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡಿದ್ದ ಬಾಲಕಿಗೆ ಧೈರ್ಯ ತುಂಬುವ ಉದ್ದೇಶದಿಂದ ಮಧ್ಯಪ್ರದೇಶದ ಸಿಂಗ್ರೌಲಿ ನಗರ ಪಾಲಿಕೆ ಆಯುಕ್ತೆ ಸವಿತಾ ಪ್ರಧಾನ್ ತಮ್ಮ ತಲೆಯನ್ನು ಸಂಪೂರ್ಣ ಬೋಳಿಸಿಕೊಂಡಿದ್ದು ಗಮನ ಸೆಳೆದಿದೆ.
ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಉದುರಿದ ಕಾರಣ ಬೇಸರಗೊಂಡಿದ್ದ ಬಾಲಕಿ, 'ಯಾರಾದರೂ ನನ್ನಂತೆಯೇ ಕಾಣಿಸಿಕೊಂಡರೆ ನನಗೆ ಒಂಟಿತನ ಅನಿಸುವುದಿಲ್ಲ' ಎಂಬ ತನ್ನ ಮನದಾಸೆಯನ್ನು ವ್ಯಕ್ತಪಡಿಸಿದ್ದಳು. ಬಾಲಕಿಯ ಈ ಮಾತು ಕೇಳಿ ಭಾವುಕರಾದ ಸವಿತಾ ಪ್ರಧಾನ, ಆಕೆಯ ಆತ್ಮಸ್ಥೈರ್ಯ ಹೆಚ್ಚಿಸಲು ತಮ್ಮ ತಲೆಯನ್ನೇ ಬೋಳಿಸಿಕೊಂಡಿದ್ದಾರೆ.
ಬೋಳಿಸಿದ ತಲೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬಾಲಕಿಯ ಆಸೆಯನ್ನು ಈಡೇರಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಸವಿತಾ ಪ್ರಧಾನ್, ಬಾಲಕಿಯ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದರು. 'ಕುಟುಂಬದ ಗೋಪ್ಯತೆಗೆ ಧಕ್ಕೆಯಾಗಬಾರದು ಎಂಬ ಕಾರಣದಿಂದ ಆಕೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ' ಎಂದು ಹೇಳಿದರು.
'ನಾನು ಇದನ್ನು ಪ್ರಚಾರಕ್ಕಾಗಿ ಮಾಡಿಲ್ಲ. ಇದು ಸಂಪೂರ್ಣವಾಗಿ ಮಾನವೀಯ ದೃಷ್ಟಿಕೋನದಿಂದ ಮಾಡಿದ ಕೆಲಸ. ನಾನು ತಲೆ ಬೋಳಿಸಿಕೊಂಡಿರುವುದಕ್ಕೆ ಜನರು ಬೇರೆ ರೀತಿಯಲ್ಲಿ ಊಹಿಸಬಾರದು ಎಂಬ ಕಾರಣಕ್ಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.
ಸವಿತಾ ಪ್ರಧಾನ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವರು ಇದನ್ನು ಸಹಾನುಭೂತಿ ಮತ್ತು ಸಂವೇದನಾಶೀಲ ಸಾರ್ವಜನಿಕ ಸೇವೆಯ ಮಾದರಿ ಎಂದು ಶ್ಲಾಘಿಸಿದ್ದಾರೆ.

