ರಾಂಚಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದ ಬೆನ್ನಲ್ಲೇ, ಹೊರಗುತ್ತಿಗೆ ಸಂಸ್ಥೆ ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೆಟ್ ಲಿಮಿಟೆಡ್ 2014ರಿಂದ ನಡೆಸಿದ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರದ್ದು ಮಾಡಲು ಸಂಪುಟ ನಿರ್ಧರಿಸಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸೋಮವಾರ ಘೋಷಿಸಿದರು.
ಆದಾಗ್ಯೂ, ಸಿಬಿಐ ತನಿಖೆ ಬೇಡಿಕೆ ಒಪ್ಪುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಜೆಪಿಎಸಿ-ಜೆಎಸ್‌ಎಸ್‌ಸಿ ಸುಧಾರಣ ಮಂಚ್ ತಿಳಿಸಿದೆ.
ನೇಮಕಾತಿ ಅಕ್ರಮಗಳ ಕುರಿತಂತೆ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೇವೇಂದ್ರ ಮಹತೊ ಅವರು ಶೀಘ್ರದಲ್ಲಿಯೇ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವುದಾಗಿ ಪ್ರಕಟಿಸಿದ್ದಾರೆ.
'ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (ಜೆಎಸ್‌ಎಸ್‌ಸಿ) ನಡೆಸಿದ ಪರೀಕ್ಷೆಗಳನ್ನೂ ರದ್ದು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೆಟ್ ಲಿಮಿಟೆಡ್ ನಡೆಸಿದ ಪರೀಕ್ಷೆ ಹಾಗೂ ಪ್ರಕಟಿಸಿದ ಫಲಿತಾಂಶಗಳನ್ನು ರದ್ದುಗೊಳಿಸಲಾಗಿದೆ' ಎಂದು ಸೊರೇನ್ ತಿಳಿಸಿದ್ದಾರೆ.
'2014ರಿಂದ ಜಾರ್ಖಂಡ್‌ನಲ್ಲಿ ನಡೆದ ಎಲ್ಲಾ ಪರೀಕ್ಷೆಗಳ ಕುರಿತು ಸಿಐಡಿ ತನಿಖೆ ನಡೆಸಲಿದೆ. ಅಕ್ರಮಗಳ ಕುರಿತು ಸಿಐಡಿ, ಎಸ್‌ಐಟಿ ತನಿಖೆಯ ವೇಳೆ ಹಲವು ಅಚ್ಚರಿಯ ಅಂಶಗಳು ಕಂಡುಬಂದಿವೆ. ರಾಜ್ಯದಲ್ಲಿರುವ ಹಲವು ಕಂಪನಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನವಿದೆ, ಈ ಹಂತದಲ್ಲಿ ಅದನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಐಎಎಸ್ ಅಧಿಕಾರಿ ಅಮಿತಾಬ್ ಕೌಶಲ್ ನೇತೃತ್ವದಲ್ಲಿ ಪರೀಕ್ಷಾ ಸುಧಾರಣಾ ಸಮಿತಿ ರಚಿಸಲಾಗುವುದು' ಎಂದು ಇದೇ ವೇಳೆ ಘೋಷಿಸಿದ್ದಾರೆ.

