ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಬುದ್ಧಿಜೀವಿ ನಕ್ಸಲರು ಪದ ಬಳಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 'ದಿಮಾಗಿ ನಕ್ಸಲರ ಪಾರ್ಟಿ' ಕಾಣಿಸಿಕೊಂಡಿತ್ತು. ಆದರೆ ಈ ಖಾತೆ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿತ್ತು.
ಇನ್‌ಸ್ಟಾಗ್ರಾಮ್ ಮತ್ತು ಘಿ (ಟ್ವಿಟರ್) ನಂತಹ ವೇದಿಕೆಗಳಲ್ಲಿ 'ದಿಮಾಗಿ ನಕ್ಸಲ್ ಪಾರ್ಟಿ' ಹೆಸರಿನಲ್ಲಿ ಅಕೌಂಟ್ ಆರಂಭವಾಗಿತ್ತು.
ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಹಾಗೂ ಎಕ್ಸ್‌ನಲ್ಲಿ 20,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದೆ. ಸೋಮವಾರ ಈ ಖಾತೆ ನಿಷ್ಕ್ರಿಯಗೊಂಡಿತ್ತಾದರೂ ಮತ್ತೆ ಸಕ್ರಿಯಗೊಂಡಿದೆ.
ಮೋದಿ ಹೇಳಿದ್ದೇನು?
ಅಧಿಕಾರದ ವಲಯಗಳಲ್ಲಿ ಬೇರೂರಿ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರುವ 'ಬುದ್ಧಿಜೀವಿ ನಕ್ಸಲರ' (ದಿಮಾಗಿ ನಕ್ಸಲರ) ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಇಂತಹವರನ್ನು ಗುರುತಿಸಿ ಪ್ರತ್ಯೇಕಿಸುವ ಮೂಲಕ ದೇಶಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕು' ಎಂದು ಇತ್ತೀಚೆಗೆ ಕರೆ ನೀಡಿದ್ದರು.
ಪ್ರಧಾನಿಯವರ ಈ ಪದಪ್ರಯೋಗವನ್ನು ವಿರೋಧ ಪಕ್ಷಗಳ ನಾಯಕರು ಸವಾಲಾಗಿ ಸ್ವೀಕರಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು 'ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ' ಎಂದು ಪ್ರತ್ಯುತ್ತರ ನೀಡಿದ್ದಾರೆ.
2026 ಮೇ ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನೀಡಿದ್ದ ಹೇಳಿಕೆಯೊಂದಕ್ಕೆ ಪ್ರತಿಯಾಗಿ ಸೃಷ್ಟಿಯಾಗಿದ್ದ 'ಕಾಕ್ರೋಚ್ ಜನತಾ ಪಾರ್ಟಿ' ಅಂತೆಯೇ, ಈ 'ದಿಮಾಗಿ ನಕ್ಸಲ್ ಪಾರ್ಟಿ' ಕೂಡ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯಾಗಿ ಹರಿದಾಡುತ್ತಿದೆ.

