ನವದೆಹಲಿ: ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸುವ ಪ್ರಸ್ತುತ ಪದ್ಧತಿಯನ್ನು ರದ್ದುಗೊಳಿಸಿ, ಅದರ ಬದಲಿಗೆ ವಿಷದ ಇಂಜೆಕ್ಷನ್ ನೀಡುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸಿತು.
'ಮರಣದಂಡನೆಗೆ ಗುರಿಯಾದ ಕೈದಿಯ ಘನತೆ ಕಾಪಾಡುವುದರ ಜತೆಗೆ ನೋವನ್ನು ಕಡಿಮೆ ಮಾಡುವ ಉದ್ದೇಶವನ್ನು ಪೂರೈಸುವಲ್ಲಿ ಬೇರೆ ಯಾವುದಾದರೂ ವಿಧಾನವು ಉತ್ತಮವಾಗಿದೆಯೇ ಎಂದು ಪರೀಕ್ಷಿಸಲು, ತಜ್ಞರ ಸಮಿತಿಯ ಮೂಲಕ ಪ್ರಸ್ತುತ ಶಿಕ್ಷೆಯ ಜಾರಿ ವಿಧಾನದ ಸಮಗ್ರ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರಕ್ಕೆ ಈ ತೀರ್ಪು ಅಡ್ಡಿಯಾಗುವುದಿಲ್ಲ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮರಣದಂಡನೆಗೆ ಗುರಿಯಾದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಸ್ತುತ ವಿಧಾನವನ್ನು ಕಾನೂನಿನಿಂದ ತೆಗೆದುಹಾಕುವಂತೆ ಕೋರಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು 2017ರಲ್ಲಿ ಸಲ್ಲಿಸಿದ್ದ ಅರ್ಜಿ ಆಧರಿಸಿ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ.
ಮರಣದಂಡನೆಗೆ ಪರ್ಯಾಯ ಮಾರ್ಗ ಅನುಸರಿಸಲು ಆದೇಶಿಸಬೇಕು ಎಂದು ಮಲ್ಹೋತ್ರಾ ಕೋರಿದ್ದರು.
'ಅಪರಾಧಿಯನ್ನು ಗಲ್ಲಿಗೇರಿಸಿದರೆ, ದೇಹವು ನೇಣು ಹಗ್ಗದಲ್ಲಿಯೇ 40 ನಿಮಿಷಗಳವರೆಗೆ ಇರುತ್ತದೆ... ಅದು ಕ್ರೂರ ಮತ್ತು ಬರ್ಬರ. ಅದರ ಬದಲು ಮಾನವೀಯವಾದ, ಘನತೆಯಿಂದ ಕೂಡಿದ ವಿಷದ ಚುಚ್ಚುಮದ್ದಿನ ಮಾರ್ಗ ಅನುಸರಿಸುವುದು ಉತ್ತಮ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕುಗಳನ್ನು ಒಳಗೊಂಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ನೀಡಿದೆ. ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ನೀಡುವ ಪದ್ಧತಿ ಇದೆ' ಎಂದು ಅರ್ಜಿಯಲ್ಲಿ ಮಲ್ಹೋತ್ರಾ ಉಲ್ಲೇಖಿಸಿದ್ದರು.
ಮರಣದಂಡನೆಗೆ ಗುರಿಯಾದ ಕೈದಿಗೆ ಗಲ್ಲು ಶಿಕ್ಷೆ ಬೇಕೇ ಅಥವಾ ಮಾರಣಾಂತಿಕ ಇಂಜೆಕ್ಷನ್ ಮೂಲಕ ಶಿಕ್ಷೆ ಬೇಕೇ ಎಂಬುದನ್ನು ಆಯ್ಕೆ ಮಾಡುವ ಅವಕಾಶವನ್ನಾದರೂ ನೀಡಬೇಕು ಎಂದು ಮಲ್ಹೋತ್ರಾ ಪ್ರತಿಪಾದಿಸಿದ್ದರು.
2023ರ ಮಾರ್ಚ್‌ನಲ್ಲಿ ಗಲ್ಲು ಶಿಕ್ಷೆ ವಿಧಾನವು ಸಮಂಜಸವಾಗಿದೆಯೇ ಮತ್ತು ಕಡಿಮೆ ನೋವಿನಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಶಿಕ್ಷೆಯ ವಿಧಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸರ್ಕಾರದಿಂದ ವರದಿಯನ್ನೂ ಕೋರಿತ್ತು.
ಆದಾಗ್ಯೂ, ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ನಿರ್ದಿಷ್ಟ ವಿಧಾನವನ್ನೇ ಅಳವಡಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.
2018ರಲ್ಲಿ ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸುವ ಮೂಲಕವೇ ಶಿಕ್ಷೆ ಜಾರಿಗೊಳಿಸಬೇಕು ಎಂಬ ಕಾನೂನು ನಿಬಂಧನೆಯನ್ನು ಕೇಂದ್ರ ಸರ್ಕಾರವು ಬಲವಾಗಿ ಸಮರ್ಥಿಸಿಕೊಂಡಿತ್ತು. ಅಲ್ಲದೆ, ಮಾರಣಾಂತಿಕ ಇಂಜೆಕ್ಷನ್ ಮತ್ತು ಗುಂಡು ಹಾರಿಸುವಿಕೆಯಂತಹ ಇತರ ವಿಧಾನಗಳು ಕಡಿಮೆ ನೋವಿನಿಂದ ಕೂಡಿಲ್ಲ ಎಂದೂ ಕೋರ್ಟ್ ಗಮನಕ್ಕೆ ತಂದಿತ್ತು.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಗಲ್ಲು ಶಿಕ್ಷೆಯು ತ್ವರಿತ ಮತ್ತು ಸರಳವಾಗಿದೆ. ಕೈದಿಯ ಯಾತನೆಯನ್ನು ಅನಗತ್ಯವಾಗಿ ತೀವ್ರಗೊಳಿಸುವುದಿಲ್ಲ ಎಂದು ಹೇಳಲಾಗಿತ್ತು.

