ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅಫಿಡವಿಟ್ ಲೋಕಸಭೆಯ 543 ಸದಸ್ಯರಲ್ಲಿ 251 ಮಂದಿ ಮತ್ತು ರಾಜ್ಯಸಭೆಯ 233 ಸದಸ್ಯರಲ್ಲಿ 75 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅಲ್ಲದೆ, ಮಾಜಿ ಮತ್ತು ಹಾಲಿ ಶಾಸಕರು, ಸಂಸದರ ವಿರುದ್ಧ 4,000ಕ್ಕೂ ಹೆಚ್ಚು ಪಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇವೆ ಎಂಬುದನ್ನು ಬಹಿರಂಗಗೊಳಿಸಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸಂಬಂಧಿಸಿ ಹಿರಿಯ ವಕೀಲ ಹಾಗೂ ಆಯಮಿಕಸ್ ಕ್ಯೂರಿ (ನ್ಯಾಯಾಲಯದ ಸಲಹೆಗಾರ) ವಿಜಯ್ ಅನ್ಸಾರಿಯಾ ಅವರು ಈ ಅಫಿಡವಿಟ್ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ಮೇಲ್ವಿಚಾರಣೆಯ ಹೊರತಾಗಿಯೂ 2018ರಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಫಿಡವಿಟ್ ಪ್ರಕಾರ, ಲೋಕಸಭೆಯ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 251 ಸಂಸದರ ಪೈಕಿ 170 ಮಂದಿ ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇವುಗಳನ್ನು ಐದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳು ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳು ಎಂದು ವ್ಯಾಖ್ಯಾನಿಸಲಾಗಿದೆ. ರಾಜ್ಯಸಭೆಯ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 75 ಸಂಸದರ ಪೈಕಿ 40 ಮಂದಿ ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.
'ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್)ನ ದತ್ತಾಂಶವನ್ನು ಅಫಿಡವಿಟ್ ಉಲ್ಲೇಖಿಸಿದೆ.
ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧದ 1,243 ಕ್ರಿಮಿನಲ್ ಪ್ರಕರಣಗಳನ್ನು 2025ರಲ್ಲಿ ವಿಲೇವಾರಿ ಮಾಡಲಾಗಿದೆ. ಆದರೆ, ಅದೇ ವರ್ಷ 1,050 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹನ್ಸಾರಿಯಾ ನ್ಯಾಯಾಲಯಕ್ಕೆ ತಿಳಿಸಿದರು. ಅಫಿಡವಿಟ್ ಪ್ರಕಾರ, ಪ್ರಸಕ್ತ 4,192 ಪ್ರಕರಣ ಬಾಕಿ ಇದೆ.
ಭಾರತದ 28 ರಾಜ್ಯಗಳ ಪೈಕಿ 14 ರಾಜ್ಯಗಳ ಮುಖ್ಯಮಂತ್ರಿಗಳು ಗಂಭೀರ ಅಪರಾಧಗಳು ಸೇರಿದಂತೆ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಅಫಿಡವಿಟ್ ತಿಳಿಸಿದೆ.
ತೆಲಂಗಾಣ ಮುಖ್ಯಮುಂತ್ರಿ ರೇವಂತ್ ರೆಡ್ಡಿ ಅವರು 89 ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದರೆ, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ 29 ಮತ್ತು ಕರ್ನಾಟಕದ ಡಿ.ಕೆ. ಶಿವಕುಮಾರ್ 19 ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

