ಪಣಜಿ : 'ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ರಾಷ್ಟ್ರೀಯ ನಾಯಕರು ಹಾಡಿದ್ದ ವಂದೇ ಮಾತರಂ ಗೀತೆಯನ್ನೇ ನಾನು ಹಾಡಿದ್ದೇನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಗೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಹಾಡಿದ್ದು ಅಪರಾಧವಾದರೆ, ಅದೇ ಗೀತೆಯನ್ನು ಹಾಡಿದ್ದ ಗಾಂಧೀಜಿ, ನೆಹರೂ, ವಲ್ಲಭಭಾಯ್ ಪಟೇಲ್ ವಿರುದ್ಧವೂ ಪ್ರಕರಣ ದಾಖಲಿಸಲಿ' ಎಂದು ಹೇಳಿದ್ದಾರೆ.
'ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ಕುರಿತು ಕಾಂಗ್ರೆಸ್ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳ ಬಗ್ಗೆ ಬಿಜೆಪಿಗೆ ತಿಳಿದಿಲ್ಲ. ಅವರು ಹುಟ್ಟುವ ಮೊದಲೇ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಬಗ್ಗೆ ನಿರ್ಧರಿಸುವ ನಿರ್ಣಯವನ್ನು ಕಾಂಗ್ರೆಸ್ ಅಂಗೀಕರಿಸಿತ್ತು' ಎಂದು ತಿಳಿಸಿದ್ದಾರೆ.
'ದಶಕಗಳಿಂದ ಹಾಡುತ್ತಿದ್ದ 'ವಂದೇ ಮಾತರಂ' ಗೀತೆಯ ಆವೃತ್ತಿಯನ್ನೇ ನಾನು ಹಾಡಿದ್ದೇನೆ. ಕಳೆದ 80 ವರ್ಷಗಳಿಂದ ಏನು ನಡೆಯುತ್ತಿದೆಯೋ ಅದನ್ನೇ ನಾನು ಮಾಡಿದ್ದೇನೆ' ಎಂದು ಹೇಳಿದ್ದಾರೆ.
'ದಕ್ಷಿಣ ಗೋವಾದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಖರ್ಗೆ ಅವರು ರಾಷ್ಟ್ರೀಯ ಗೀತೆಯ ಅಪೂರ್ಣ ಆವೃತ್ತಿಯನ್ನು ಹಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಗೀತೆಗೆ ಅಗೌರವ ತೋರಿಸಿದೆ' ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿತ್ತು.

