ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಇತ್ತೀಚೆಗೆ ಹಾಕಿರುವ ನಿರಂತರ (24ಘಿ7) ನೀರು ಸರಬರಾಜು ಪೈಪ್‌ಲೈನ್ ಪರೀಕ್ಷೆ ವೇಳೆ, ರಸ್ತೆಯೇ ಬಿರುಕು ಬಿಟ್ಟಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ರಸ್ತೆಯನ್ನು, ಮೂರು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು ₹ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ರಸ್ತೆ ಪಕ್ಕದ ಮಳಿಗೆಯೊಂದರಲ್ಲಿ ಹಾಕಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ನೀರು ಸರಬರಾಜಿನ ಒತ್ತಡದಿಂದಾಗಿ ಪೈಪ್‌ಲೈನ್ ಒಡೆದುಹೋಗಿದ್ದು, ನೀರು ಹೊರಬಂದ ರಭಸಕ್ಕೆ ರಸ್ತೆಯೇ ಬಿರುಕು ಬಿಟ್ಟಿದೆ. ರಸ್ತೆ ಮಧ್ಯದಿಂದ ಏಕಾಏಕಿ ನೀರು ಹೊರಬರುತ್ತಿರುವುದನ್ನು ಗಮನಿಸಿದರೆ, ಪ್ರಯಾಣಿಕರು ಕೂಡಲೇ ತಮ್ಮ ವಾಹನಗಳನ್ನು ಹಿಂದಕ್ಕೆ ತೆಗೆದುಕೊಂಡಿರುವುದು ವಿಡಿಯೊದಲ್ಲಿದೆ.
ಪೈಪ್‌ಲೈನ್ ಪರೀಕ್ಷೆ ಸಂದರ್ಭದಲ್ಲೇ ಈ ರೀತಿ ಆಗಿರುವುದು ರಸ್ತೆ ನಿರ್ಮಾಣ ಕಾಮಗಾರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೈಪ್‌ನಲ್ಲಿ ಹರಿಯುವ ನೀರಿನ ಒತ್ತಡವನ್ನೇ ತಡೆಯಲಾಗದ ರಸ್ತೆಯು ಭಾರಿ ಮಳೆ, ನಿರಂತರ ವಾಹನ ಸಂಚಾರದ ಒತ್ತಡವನ್ನು ಹೇಗೆ ತಡೆಯುತ್ತದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಇಂದೋರ್ ನಗರಪಾಲಿಕೆ ಸದಸ್ಯ ಹಾಗೂ ಪಾಲಿಕೆಯ ಮಾಹಿತಿ ಸಮಿತಿ ಮುಖ್ಯಸ್ಥ ರಾಜೇಂದ್ರ ರಾಥೋಡ್ ಆಗ್ರಹಿಸಿದ್ದಾರೆ. ಹಾಗೆಯೇ, ಸ್ಮಾರ್ಟ್ ಸಿಟಿ ಯೋಜನನೆ ಅಡಿಯಲ್ಲಿ ಒಟ್ಟು ಸುಮಾರು ₹ 1,000 ಕೋಟಿ ವೆಚ್ಚದ ಹಲವು ಕಾಮಗಾರಿಗಳು ನಡೆದಿವೆ. ಎಲ್ಲ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಇದೀಗ ಪ್ರಶ್ನೆ ಎದ್ದಿದೆ ಎಂದು ಆರೋಪಿಸಿದ್ದಾರೆ.
ಇದೇ ವಿಡಿಯೊವನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದೆ.

