ಅಯೋಧ್ಯೆ : ಇಲ್ಲಿನ ವೈದ್ಯಕೀಯ ಕಾಲೇಜೊಂದರ ಎಕ್ಸ್-ರೇ ವಿಭಾಗದಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯಿದೆ ಎನ್ನಲಾದ ಕೈಬರಹದ ಚೀಟಿ ಪತ್ತೆಯಾದ ನಂತರ, ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜರ್ಷಿ ದಶರಥ ಸ್ವಾಯತ್ತ ವೈದ್ಯಕೀಯ ಕಾಲೇಜಿನ ಎಕ್ಸ್-ರೇ ಪ್ರಯೋಗಾಲಯದಲ್ಲಿ ರಾತ್ರಿ ಪಾಳಿ ಮುಗಿದ ನಂತರ ಈ ಚೀಟಿ ಪತ್ತೆಯಾಗಿದ್ದು, ಸಿಬ್ಬಂದಿಯು ಶನಿವಾರ ಇದನ್ನು ಕಾಲೇಜು ಆಡಳಿತ ಮಂಡಳಿಗೆ ಹಸ್ತಾಂತರಿಸಿದ್ದಾರೆ. ನಂತರ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ.
ಬಲರಾಮಪುರ ಜಿಲ್ಲೆಯ ನಿವಾಸಿಯಾದ ಸರ್ಫರಾಜ್ ಎಂಬ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಆತ ಈ ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬೊರೇಟರಿ ಟೆಕ್ನಿಷಿಯನ್ ಕೋರ್ಸ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆ, ರಾತ್ರಿ ಕರ್ತವ್ಯದಲ್ಲಿದ್ದಾಗ ತಾನು ಲ್ಯಾಪ್‌ಟಾಪ್‌ನಲ್ಲಿ ಸಿನಿಮಾ ನೋಡುತ್ತಿದ್ದೆನೆಂದು ಮತ್ತು ಸಿನಿಮಾದಲ್ಲಿ ತೋರಿಸಲಾದ ಬಾಂಬ್ ತಯಾರಿಕೆಯ ಮಾಹಿತಿಯನ್ನು ಕಾಗದದ ಮೇಲೆ ಬರೆದುಕೊಂಡಿದ್ದೆನೆಂದು ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಆತನ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಜಿ), ವಿಶೇಷ ಕಾರ್ಯಪಡೆ(ಎಸ್‌ಟಿಎಫ್), ಗುಪ್ತಚರ ವಿಭಾಗ(ಐಬಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಆತನೊಂದಿಗೆ ಕರ್ತವ್ಯದಲ್ಲಿದ್ದ ವಿದ್ಯಾರ್ಥಿಯನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಪಾಳಿ ಮುಗಿದ ನಂತರ ತನ್ನ ಸ್ವಂತ ಊರಿಗೆ ತೆರಳಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಸಂಪರ್ಕಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದುವರೆಗೆ ಯಾರನ್ನೂ ಬಂಧಿಸಿಲ್ಲ ಮತ್ತು ಯಾವುದೇ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

