HEALTH TIPS

ಆಂಧ್ರದತ್ತ ಜಾಗತಿಕ ಕಂಪನಿಗಳ ಕಣ್ಣು: ಮೋದಿ

ವಿಶಾಖಪಟ್ಟಣ: ಜಾಗತಿಕ ಕಂಪನಿಗಳು ಆಂಧ್ರ ಪ್ರದೇಶದಲ್ಲಿ ಅವಕಾಶವನ್ನು ಅನ್ವೇಷಿಸುತ್ತಿವೆ. ರಾಜ್ಯವು ಉತ್ಪಾದನಾ ಚಟುವಟಿಕೆಗಳ ಕೇಂದ್ರಬಿಂದು ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. 


ಭೋಗಪುರಂನಲ್ಲಿ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತು ₹18,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

'ವಿಮಾನ ನಿಲ್ದಾಣವು ಆಂಧ್ರ ಪ್ರದೇಶದ ಅದರಲ್ಲಿಯೂ ಉತ್ತರದ ಪ್ರದೇಶಗಳ ಅಭಿವೃದ್ಧಿಗೆ 'ರನ್‌ ವೇ' ಆಗಲಿದೆ' ಎಂದು ಬಣ್ಣಿಸಿದರು.

'ಗೂಗಲ್ ಸಂಸ್ಥೆಯು ವಿಶಾಖಪಟ್ಟಣದಲ್ಲಿ ಎ.ಐ ಮತ್ತು ಕ್ಲೌಡ್‌ ಮೂಲಸೌಕರ್ಯ ಕ್ಯಾಂಪಸ್‌ ನಿರ್ಮಾಣಕ್ಕಾಗಿ 15 ಬಿಲಿಯನ್‌ ಡಾಲರ್‌ ಘೋಷಣೆ ಮಾಡಿದೆ. ಇನ್ನೂ ಹಲವು ಜಾಗತಿಕ ಸಂಸ್ಥೆಗಳು ಹೊಸ ಅವಕಾಶಗಳನ್ನು ಎದುರು ನೋಡುತ್ತಿವೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ' ಎಂದು ಹೇಳಿದರು.

ದೇಶದ ವಿಮಾನಯಾನ ಕ್ಷೇತ್ರವು ಕಳೆದ 12 ವರ್ಷಗಳಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯೂ 74ರಿಂದ 166ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಈ ಮಧ್ಯೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಈ ಮುಂಚೆ ವಿಮಾನ ನಿಲ್ದಾಣಗಳಿಗೆ ಒಂದು ಕುಟುಂಬದ ಹೆಸರು ಇಡಲಾಗುತ್ತಿತ್ತು' ಎಂದು ಹರಿಹಾಯ್ದರು.

ಅಲ್ಲೂರಿ ಸೀತಾರಾಮ ರಾಜು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಮಾರು ₹5,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೋದಿ ಪರ ನಿಂತ ನಾಯ್ಡು, ಪವನ್‌ ಕಲ್ಯಾಣ್‌

ಹೈದರಾಬಾದ್‌: ಜೆನ್‌ ಝೀ ಪ್ರತಿಭಟನೆ ಸುತ್ತಲಿನ ವಿವಾದದ ಬೆನ್ನಲ್ಲೇ ಆಂಧ್ರ ಪ್ರದೇಶದ ಎನ್‌ಡಿಎ ಪಾಲುದಾರ ಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಬೆಂಬಲಿಸಿದವು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 'ನರೇಂದ್ರ ಮೋದಿ ಅವರಷ್ಟು ಬದ್ಧತೆಯನ್ನು ಹೊಂದಿರುವ ನಾಯಕರನ್ನು ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಕಂಡಿಲ್ಲ. ಪ್ರತಿಯೊಬ್ಬರೂ ಅವರ ಪರ ನಿಲ್ಲಬೇಕು' ಎಂದು ಕರೆ ನೀಡಿದರು.

ಭಾರತಕ್ಕೆ ಸರಿಯಾದ ಸಮಯಕ್ಕೆ ಸೂಕ್ತ ನಾಯಕ ಸಿಕ್ಕಿದ್ದಾರೆ. ಐದು ದಶಕದ ಸಾರ್ವಜನಿಕ ಜೀವನದಲ್ಲಿ ಇಂಥ ದೂರದೃಷ್ಟಿ ಇರುವ ಮತ್ತೊಬ್ಬ ನಾಯಕನನ್ನು ನಾನು ಕಂಡಿಲ್ಲ' ಎಂದು ಒತ್ತಿ ಹೇಳಿದರು. ಜನಸೇನಾ ಮುಖ್ಯಸ್ಥ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು 'ಜಂತರ್ ಮಂತರ್‌ನಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆ ವಿಚಾರವಾಗಿ ಆನ್‌ಲೈನ್‌ ಮತ್ತು ಸಾರ್ವಜನಿಕವಾಗಿ ಪ್ರಧಾನಿ ಮೋದಿ ಅವರ ವಿರುದ್ಧ ಪ್ರಕಟವಾಗುತ್ತಿರುವ ನಿಂದನಾತ್ಮಕ ಟೀಕೆಗಳು ತೀವ್ರ ನೋವುಂಟು ಮಾಡಿವೆ. ರಜೆಯನ್ನೇ ಪಡೆಯದೆ ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡುವ ನಾಯಕರ ವಿರುದ್ಧದ ನಿಂದನೆಯು ಕಣ್ಣೀರು ತರಿಸುತ್ತದೆ' ಎಂದು ಭಾವುಕವಾಗಿ ಮಾತನಾಡಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries