ನವದೆಹಲಿ: ಭಾರತ ಹಾಕಿ ತಂಡದ ಜರ್ಸಿಯನ್ನು ನೀಲಿ ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸುವ ಬಗ್ಗೆ ತಮ್ಮ ಜೊತೆಗಾಗಲಿ ಅಥವಾ ಕಾರ್ಯನಿರ್ವಾಹಕ ಮಂಡಳಿಯ ಜೊತೆಗಾಗಲಿ ಯಾರೂ ಸಮಾಲೋಚನೆ ನಡೆಸಿಲ್ಲ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಭಾರತ ಹಾಕಿ ತಂಡದ ಕೆಲವು ಮಾಜಿ ನಾಯಕರು 'ಬಣ್ಣ ಬದಲಾಯಿಸಿರುವ' ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು.
ಬೆಲ್ಜಿಯಂ- ನೆದರ್ಲೆಂಡ್ಸ್‌ನಲ್ಲಿ ಈ ತಿಂಗಳ ಮಧ್ಯದಲ್ಲಿ ಆರಂಭವಾಗುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡ ನೀಲಿ ಜರ್ಸಿ ಬದಲು ಕೇಸರಿ ಬಣ್ಣದ ಜರ್ಸಿ ಧರಿಸಿ ಆಡಲಿದೆ ಎಂದು ಶುಕ್ರವಾರ ಹಾಕಿ ಇಂಡಿಯಾ ತಿಳಿಸಿತ್ತು. ಆದರೆ ಸ್ವತಃ ಅಧ್ಯಕ್ಷರೇ ತಮ್ಮ ಜೊತೆ ಈ ಬಗ್ಗೆ ಚರ್ಚಿಸಿಲ್ಲ ಎನ್ನುವ ಮೂಲಕ ಹೊಸದಾಗಿ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಕಾರ್ಯ ನಿರ್ವಾಹಕ ಮಂಡಳಿ ಸದಸ್ಯರು, ಕಾರ್ಯದರ್ಶಿ ಭೋಲಾನಾಥ್ ಸಿಂಗ್, ಆಯ್ಕೆ ಸಮಿತಿ ಅಧ್ಯಕ್ಷ ಆರ್.ಪಿ.ಸಿಂಗ್ ಮತ್ತು ಅವರಿಗೆ ಬರೆದ ಪತ್ರದಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಟೀಕೆ: ಜರ್ಸಿ ಬಣ್ಣ ಬದಲಾಯಿಸಿರುವ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಸಂಕುಚಿತ ಮನಸ್ಸಿನ ರಾಜಕೀಯ ಪ್ರಯೋಗಗಳಿಗೆ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಮಾಧ್ಯಮವಾಗಿ ಬಳಸಬಾರದು ಎಂದು ಪಕ್ಷವು ಹೇಳಿದೆ.
ತಂಡದ ಬಣ್ಣವು ಕೋಟ್ಯಂತರ ಭಾರತೀಯ ಭಾವನೆಗಳೊಂದಿಗೆ ಮತ್ತು ಕ್ರೀಡಾ ಸಂಪ್ರದಾಯದ ಜೊತೆ ಬೆಸೆದುಕೊಂಡಿದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

