HEALTH TIPS

ಪಾಕಿಸ್ತಾನವೇ ಸಿಂಧೂ ಒಪ್ಪಂದದ ತಳಹದಿ ಕುಸಿಯುವಂತೆ ಮಾಡಿದೆ: ರಾಯಭಾರಿ ವಿನಯ್ ಕ್ವಾತ್ರಾ

ನವದೆಹಲಿ: ಸಿಂಧೂ ನದಿ ನೀರು ಒಪ್ಪಂದ (IWT)ವನ್ನು ಸ್ಥಗಿತಗೊಳಿಸಿರುವ ಭಾರತದ ನಿರ್ಧಾರಕ್ಕೆ ಪಾಕಿಸ್ತಾನದ ದೀರ್ಘಕಾಲದ ನಡವಳಿಕೆಯೇ ಕಾರಣ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ. 


ನ್ಯೂಸ್‌ವೀಕ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿಯಾಗಿದ್ದ ಸಿಂಧೂ ನದಿ ನೀರು ಒಪ್ಪಂದವು 'ಸದ್ಭಾವನೆ ಮತ್ತು ಸ್ನೇಹದ ಮನೋಭಾವದಲ್ಲಿ' ರೂಪುಗೊಂಡಿತ್ತು.

ಆದರೆ ಯುದ್ಧಗಳು, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ನಿರಂತರ ವೈರತ್ವದ ಮೂಲಕ ಪಾಕಿಸ್ತಾನವೇ ಆ ಸದ್ಭಾವನೆಯ ತಳಹದಿಯನ್ನು ಹಾಳುಮಾಡಿದೆ ಎಂದು ಆರೋಪಿಸಿದ್ದಾರೆ.

"ಒಪ್ಪಂದದ ಮುನ್ನುಡಿಯಲ್ಲಿ ಅದನ್ನು 'ಸದ್ಭಾವನೆ ಮತ್ತು ಸ್ನೇಹದ ಮನೋಭಾವದಲ್ಲಿ' ಮಾಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ ಕಳೆದ ಅರ್ಧ ಶತಮಾನದಲ್ಲಿ ಪಾಕಿಸ್ತಾನ ತನ್ನ ನಡವಳಿಕೆಯಿಂದ ಆ ಸದ್ಭಾವನೆಯನ್ನೇ ನಾಶಗೊಂಡಿದೆ. ಆದ್ದರಿಂದ ಭಾರತ ಒಪ್ಪಂದವನ್ನು ಸ್ಥಗಿತಗೊಳಿಸಿರುವುದು ಅಸಹಜ ಕ್ರಮವಲ್ಲ" ಎಂದು ಕ್ವಾತ್ರಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬೆನ್ನಲ್ಲೇ ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಈ ಕ್ರಮವನ್ನು ವಿರೋಧಿಸಿ ಪಾಕಿಸ್ತಾನ ಸಮ್ಮೇಳನ ಆಯೋಜಿಸಿದ ಕೆಲವೇ ದಿನಗಳ ಬಳಿಕ ಕ್ವಾತ್ರಾ ಅವರ ಲೇಖನ ಪ್ರಕಟವಾಗಿದೆ.

1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿದ ಈ ಒಪ್ಪಂದದ ಪ್ರಕಾರ, ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳಲ್ಲಿ ಮೂರು ಪೂರ್ವದ ನದಿಗಳ ಬಳಕೆಯ ಹಕ್ಕು ಭಾರತಕ್ಕೆ ಮತ್ತು ಮೂರು ಪಶ್ಚಿಮದ ನದಿಗಳ ಬಳಕೆಯ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಇದರಿಂದ ಸುಮಾರು ಶೇ.20ರಷ್ಟು ನೀರಿನ ಬಳಕೆಯ ಹಕ್ಕು ಭಾರತಕ್ಕೆ ಹಾಗೂ ಶೇ.80ರಷ್ಟು ನೀರಿನ ಬಳಕೆಯ ಹಕ್ಕು ಪಾಕಿಸ್ತಾನಕ್ಕೆ ದೊರಕಿತ್ತು.

"ಈ ವ್ಯವಸ್ಥೆಯಿಂದ ಭಾರತದ ಹಲವು ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆಯಾದರೂ, ಭಾರತ ಒಪ್ಪಂದವನ್ನು ಪ್ರಾಮಾಣಿಕವಾಗಿ ಪಾಲಿಸಿತು" ಎಂದು ಅವರು ಹೇಳಿದ್ದಾರೆ.

1965, 1971 ಮತ್ತು 1999ರ ಯುದ್ಧಗಳು, 2001ರ ಸಂಸತ್ ಮೇಲಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್ ಮತ್ತು ಉರಿ ದಾಳಿಗಳು, 2019ರ ಪುಲ್ವಾಮಾ ದಾಳಿ ಹಾಗೂ 2025ರ ಪಹಲ್ಗಾಮ್ ದಾಳಿಗಳನ್ನು ಉಲ್ಲೇಖಿಸಿದ ಅವರು, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ.

ಒಪ್ಪಂದದಡಿ ಭಾರತಕ್ಕೆ ಇರುವ ಹಕ್ಕುಗಳನ್ನು ಬಳಸಿಕೊಂಡು ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲು ಮಾಡಿದ ಪ್ರಯತ್ನಗಳಿಗೆ ಪಾಕಿಸ್ತಾನ ನಿರಂತರ ಅಡ್ಡಿಪಡಿಸಿದೆ. ಒಪ್ಪಂದವನ್ನು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಪರಿಷ್ಕರಿಸುವ ಭಾರತದ ಪ್ರಸ್ತಾಪಗಳನ್ನೂ ಅದು ವಿರೋಧಿಸಿದೆ ಎಂದು ಅವರು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಮತ್ತೆ ಮಾತುಕತೆ ಆರಂಭಿಸಬೇಕು ಎನ್ನುವವರು ಹಿಂದಿನ ಅನುಭವಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕ್ವಾತ್ರಾ ಹೇಳಿದ್ದಾರೆ.

"ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಸಾಗುವುದಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯುವುದಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯುವುದಿಲ್ಲ" ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನೂ ಅವರು ಉಲ್ಲೇಖಿಸಿದ್ದಾರೆ.

ಪಾಕಿಸ್ತಾನದಲ್ಲಿನ ನೀರಿನ ಕೊರತೆಗೆ ಭಾರತದ ಕ್ರಮಗಳು ಕಾರಣವಲ್ಲ. ಅಲ್ಲಿನ ಕಳಪೆ ನೀರು ನಿರ್ವಹಣೆ ಹಾಗೂ ನೀರಿನ ದುರುಪಯೋಗವೇ ಕಾರಣ. ಭಾರತವನ್ನು ದೂಷಿಸುವ ಬದಲು ತನ್ನ ನೀರು ನಿರ್ವಹಣೆಯನ್ನು ಸುಧಾರಿಸಿಕೊಳ್ಳಬೇಕು ಎಂದು ಕ್ವಾತ್ರಾ ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries