ಡೆಹ್ರಾಡೂನ್:ಉತ್ತರಾಖಂಡದ ಪ್ರಸಿದ್ಧ ತೀರ್ಥಕ್ಷೇತ್ರ ಬದರೀನಾಥ ಮಂದಿರದ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಅಮಾನತುಗೊಂಡಿರುವ ಬದರೀನಾಥ-ಕೇದಾರನಾಥ ಮಂದಿರ ಸಮಿತಿಯ (ಬಿಕೆಟಿಸಿ) ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎಂದು ಚಮೋಲಿ ಪೊಲೀಸ್ ವಿಶೇಷ ತನಿಖಾ ತಂಡವು (ಸಿಟ್) ಶುಕ್ರವಾರ ತಿಳಿಸಿದೆ.
ನೌಟಿಯಾಲ್ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬದರೀನಾಥ ಧಾಮದಲ್ಲಿಯ ಆತನ ನಿವಾಸದಲ್ಲಿ ನಡೆಸಿದ ಶೋಧದ ವೇಳೆ ಬೆಳ್ಳಿ ನಾಣ್ಯಗಳು, ಆಭರಣಗಳು, ನೇಪಾಳಿ ಕರೆನ್ಸಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವು ಮಂದಿರದ ಕಾಣಿಕೆ ದುರುಪಯೋಗಕ್ಕೆ ಸಂಬಂಧಿಸಿವೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.
ನೌಟಿಯಾಲ್ ಆಸ್ತಿಗಳನ್ನು ಗಳಿಸಿದ್ದು ಹೇಗೆ ಎನ್ನುವುದನ್ನು ಪರಿಶೀಲಿಸಲು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪೋಲಿಸರು ಜಪ್ತಿ ಮಾಡಿದ್ದಾರೆ.
ವಿಚಾರಣೆ ವೇಳೆ ನೌಟಿಯಾಲ್ ಬೇರೆ ಯಾವುದೇ ಆರೋಪಿಗಳ ಭಾಗವಹಿಸುವಿಕೆಯನ್ನು ದೃಢಪಡಿಸಿಲ್ಲ ಎಂದು ಬದರೀನಾಥ ಠಾಣಾಧಿಕಾರಿ ಮಹಾದೇವ ಉನಿಯಾಲ್ ತಿಳಿಸಿದರು.
ಪೊಲೀಸ್ ಕಸ್ಟಡಿಯ ಅವಧಿ ಮುಗಿದ ನಂತರ ನೌಟಿಯಾಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜುಲೈ 12ರಂದು ಬಂಧಿಸಲ್ಪಟ್ಟ ನೌಟಿಯಾಲ್,ವಿಐಪಿ ಪ್ರೋಟೋಕಾಲ್ ಸಂಘಟಿಸುವ ಮತ್ತು ಬದರೀನಾಥ ಮಂದಿರದಲ್ಲಿ ಕಾಣಿಕೆ ಎಣಿಕೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ. ತನಿಖೆಯ ಭಾಗವಾಗಿ ವಿಐಪಿ ದರ್ಶನಕ್ಕಾಗಿ ಸಂಗ್ರಹಿಸಿದ ಹಣದ ನಿರ್ವಹಣೆಯನ್ನು ಸಹ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮಂದಿರದಲ್ಲಿ ಕಾಣಿಕೆ ಕಳ್ಳತನದ ಆರೋಪವನ್ನು ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಬಿಕೆಟಿಸಿ ರಚಿಸಿದ ನಾಲ್ವರು ಸದಸ್ಯರ ಆಂತರಿಕ ಸಮಿತಿಯು ತನ್ನ ಪ್ರಾಥಮಿಕ ವರದಿಯನ್ನು ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದೆ. ಪ್ರತ್ಯೇಕವಾಗಿ ಪೊಲೀಸರ ಎಸ್‌ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದರೆ, ಉತ್ತರಾಖಂಡ ಸರಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸ್ವತಂತ್ರ ತನಿಖೆಯನ್ನು ನಡೆಸುತ್ತಿದೆ.

