ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ನವದೆಹಲಿಯಿಂದ ತೆರಳಿದರು.
'ಭಯೋತ್ಪಾದನೆ ಮುಕ್ತ ಪ್ರದೇಶವಾಗಿಸಲು ಸದಸ್ಯ ರಾಷ್ಟ್ರಗಳ ಜತೆ ಕೆಲಸ ಮಾಡುವುದಲ್ಲದೆ, ಭಾರತದ ದೃಷ್ಟಿಕೋನವನ್ನು ಪ್ರತಿಪಾದಿಸಲು ಕಾತರದಿಂದ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ' ಎಂದು ಇಲ್ಲಿಂದ ಹೊರಡುವ ಮುನ್ನ ಮೋದಿ ತಿಳಿಸಿದ್ದಾರೆ.
'ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜತೆಗೆ ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಿ, ನಾಗರಿಕ ಸಂಪರ್ಕವನ್ನು ಮತ್ತಷ್ಟು ಗಾಢಪಡಿಸಲು ಒತ್ತು ನೀಡಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಆಗಸ್ಟ್ 29 ಹಾಗೂ 30ರಂದು ಉಜ್ಬೇಕಿಸ್ತಾನಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಇದಾದ ನಂತರ (ಆ.30-ಸೆ.1)ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭೇಟಿಯ ವೇಳೆ ತಾಷ್ಕೆಂಟ್‌ನಲ್ಲಿರುವ ಶಾಸ್ತ್ರಿ ಸ್ಮಾರಕ ಹಾಗೂ ತಾಷ್ಕೆಂಟ್ ವಿಶ್ವವಿದ್ಯಾಲಯದ ಓರಿಯಂಟಲ್ ಸ್ಟಡೀಸ್‌ನಲ್ಲಿರುವ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡಿ ಗೌರವ ನಮನ ಸಲ್ಲಿಸಲಿದ್ದಾರೆ.
'ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಭದ್ರತೆ, ಸಂಪರ್ಕ ಹಾಗೂ ಅವಕಾಶಗಳ ಕುರಿತ ಆದ್ಯತೆ ಕುರಿತು ಪ್ರಸ್ತಾಪಿಸಲಿದ್ದಾರೆ. ಸಭೆಯ ಬಳಿಕ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ಜತೆಗೂ ಸಭೆ ನಡೆಸಲಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

