ನವದೆಹಲಿ : ಮದುರೆ ಸಮೀಪದ ತಿರುಪರನ್‌ಕುಂದ್ರಂ ಬೆಟ್ಟದ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ವಿಪುಲ್ ಎಂ. ಪಂಚೋಲಿ ನೇತೃತ್ವದ ನ್ಯಾಯಪೀಠವು ಮೂಲ ಅರ್ಜಿದಾರರಾದ ರಾಮ ರವಿಕುಮಾರ್ ಹಾಗೂ ಇತರರರಿಗೆ ನೋಟಿಸ್ ಜಾರಿಗೊಳಿಸಿತು. ಆದರೆ, ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.
ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಬಾಕಿ ಇರುವ ವಿಷಯಕ್ಕೆ ಸೇರಿಸಿ ವಿಚಾರಣೆಯನ್ನು ಮುಂದೂಡಿತು.
ಹಬ್ಬದ ದಿನದಂದು ದೀಪ ಬೆಳಗಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠವು ಜನವರಿ 6ರಂದು ನೀಡಿದ್ದ ತೀರ್ಪನ್ನು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದೆ.
ಏಕಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಕೂಡ ಎತ್ತಿ ಹಿಡಿದಿತ್ತು. 'ದೀಪ ಹಚ್ಚಲು ಅವಕಾಶ ನೀಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ರಾಜ್ಯ ಸರ್ಕಾರದ ಭಯವು ಹಾಸ್ಯಾಸ್ಪದ ಮತ್ತು ನಂಬಲು ಆಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಇರುವ ಆತಂಕವು, ರಾಜ್ಯ ಸರ್ಕಾರ ತನ್ನ ಅನುಕೂಲಕ್ಕಾಗಿ ತಾನೇ ಸೃಷ್ಟಿಸಿದ 'ಕಾಲ್ಪನಿಕ ಭೂತ' ಅಲ್ಲದೇ ಬೇರೇನೂ ಅಲ್ಲ' ಎಂದಿದ್ದ ಹೈಕೋರ್ಟ್, ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು.

