ಬೀಜಿಂಗ್: ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಆಹಾರ ಪದ್ಧತಿ ಹಾಗೂ ಸಂಸ್ಕೃತಿಯನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಭಾರತೀಯ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ 'ಮುಕ್ತ ಸಂವಾದ' ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ಭಾಗವಹಿಸಿದ್ದು, ತಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.
ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ದೊರೈಸ್ವಾಮಿ, ಕೌನ್ಸಿಲರ್‌ಗಳಾದ ನಿತಿನ್‌ಜೀತ್ ಸಿಂಗ್ ಮತ್ತು ರಮೇಶ್ ಸಿಂಗ್ ಅವರು ಭಾರತೀಯ ಸಮುದಾಯದವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ವಿಷಯಗಳ ಹಂಚಿಕೊಳ್ಳುವಿಕೆ, ವೃತ್ತಿಪರರಿಗೆ ಉದ್ಯೋಗ ವೀಸಾ ನೀಡುವುದನ್ನು ಕಡಿತಗೊಳಿಸಿರುವುದು ಮತ್ತು ಸಂಗಾತಿಯ ಉದ್ಯೋಗದ ಮೇಲಿನ ನಿರ್ಬಂಧಗಳ ಕುರಿತು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ದ್ವಿಪಕ್ಷೀಯ ಬಾಂಧವ್ಯ ಸುಧಾರಿಸುವ ಪ್ರಯತ್ನಗಳ ಭಾಗವಾಗಿ ಚೀನಾದ ಅಧಿಕಾರಿಗಳೊಂದಿಗೆ ದೊರೈಸ್ವಾಮಿ ಮಾತುಕತೆ ನಡೆಸಿದ್ದಾರೆ. ಭಾರತೀಯ ವೀಸಾಗೆ ಅರ್ಜಿ ಸಲ್ಲಿಸುವ ಚೀನಾದ ಪ್ರಜೆಗಳಿಗೆ ಅಗತ್ಯವಿರುವ ದಾಖಲೆಗಳ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ನಕಾರಾತ್ಮಕ ಮತ್ತು ನಿಂದನಾತ್ಮಕ ವಿಷಯಗಳ ಕುರಿತಾದ ಆತಂಕದ ಬಗ್ಗೆ ಪ್ರತಿಕ್ರಿಯಸಿದ ದೊರೈಸ್ವಾಮಿ, ಚೀನಾ ಸರ್ಕಾರವೂ ಇಂತಹ ದ್ವೇಷಪೂರಿತ ವಿಷಯಗಳ ಹೆಚ್ಚಳದ ಬಗ್ಗೆ ಕಳವಳ ಹೊಂದಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದೆ' ಎಂದಿದ್ದಾರೆ.
ರಾಯಭಾರ ಕಚೇರಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಖಚಿತ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಮಾಹಿತಿಗೆ ಕಡಿವಾಣ ಹಾಕುತ್ತಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಪ್ರದರ್ಶಿಸಲು, ವಸಂತ ಮೇಳದಂತಹ ವಾರ್ಷಿಕ ಕಾರ್ಯಕ್ರಮಗಳಿಗೆ ಸಿಕ್ಕ ಭಾರಿ ಪ್ರತಿಕ್ರಿಯೆಯನ್ನು ಆಧರಿಸಿ ಇನ್ನಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ರಾಯಭಾರ ಕಚೇರಿ ಚಿಂತನೆ ನಡೆಸಿದೆ ಎಂದಿದ್ದಾರೆ.
ಉದ್ಯೋಗ ವೀಸಾ ಸಂಬಂಧ ಭಾರತೀಯರಿಗೆ ನೆರವಾಗಲು ಕಾನೂನು ವೃತ್ತಿಪರರೊಂದಿಗೆ ಕಾರ್ಯವಿಧಾನವೊಂದನ್ನು ರೂಪಿಸುತ್ತೇವೆ. ಜತೆಗೆ ಕಾನ್ಸುಲರ್ ಸೇವೆಗಳನ್ನು ಸುಧಾರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

