ಜೆರುಸಲೇಂ: 'ಹಮಾಸ್ ಬಂಡುಕೋರ ಸಂಘಟನೆಯು ಪ್ರಾಮಾಣಿಕವಾಗಿ ನಿಶ್ಯಸ್ತ್ರೀಕರಣಗೊಳ್ಳುವ ಬದಲು ತನ್ನ ಸೇನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿರುವುದು ಇಸ್ರೇಲ್‌ನ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ' ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ವಕ್ತಾರ ಡೊರೊನ್ ಸ್ಪೀಲ್‌ಮನ್ ಅವರು 'ದಿ ಅಸೋಸಿಯೇಟೆಡ್ ಪ್ರೆಸ್'ಗೆ ಭಾನುವಾರ ತಿಳಿಸಿದ್ದಾರೆ.
'ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮುನ್ನ, ಗಾಜಾದ ಶೇಕಡ 60ಕ್ಕಿಂತ ಹೆಚ್ಚು ಪ್ರದೇಶವನ್ನು ನಿಯಂತ್ರಿಸುತ್ತಿರುವ ಇಸ್ರೇಲ್ ಸೇನೆಯು ಅಲ್ಲಿಂದ ಹಿಂದೆ ಸರಿಯುವುದಿಲ್ಲ' ಎಂದಿದ್ದಾರೆ.
'ನಾವು ಹಮಾಸ್ ಅನ್ನು ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸುವ ಮುನ್ನವೇ ನಮ್ಮ ಪಡೆಗಳನ್ನು ಹಿಂತೆಗೆದುಕೊಂಡರೆ, ಅದು ಇಡೀ ಗಾಜಾದಾದ್ಯಂತ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತದೆ. ತನ್ನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಪುನರ್ ನಿರ್ಮಿಸುತ್ತದೆ. ಮತ್ತೊಮ್ಮೆ ಇಸ್ರೇಲಿಗಳಿಗೆ ಬೆದರಿಕೆಯೊಡ್ಡುತ್ತದೆ. 2023ರಲ್ಲಿ ಇಸ್ರೇಲ್-ಗಾಜಾ ಯುದ್ಧಕ್ಕೆ ಕಾರಣವಾದ ಅಕ್ಟೋಬರ್ 7ರ ಮಾದರಿಯ ಮತ್ತೊಂದು ದಾಳಿಯನ್ನು ನಡೆಸಲು ಪ್ರಯತ್ನಿಸುತ್ತದೆ' ಎಂದು ಹೇಳಿದ್ದಾರೆ.
ನಿಶ್ಯಸ್ತ್ರೀಕರಣ ಒಪ್ಪಂದವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ಘೋಷಿಸಿದ್ದರು. ಇದರ ಕುರಿತು ಇಸ್ರೇಲ್‌ನಿಂದ ಅಧಿಕೃತವಾಗಿ ಹೊರಬಂದ ಮೊದಲ ಸಾರ್ವಜನಿಕ ಹೇಳಿಕೆ ಇದು.

