ಕಾಶ್ಮೀರ: ಶೋಪಿಯಾನ್‌ನ ಐತಿಹಾಸಿಕ ಮೊಘಲ್ ರಸ್ತೆಯ ದಟ್ಟ ಕಾಡುಗಳಿಂದ ಹಿಡಿದು, ಪಹಲ್ಗಾಮ್ ಸಮೀಪದ ಆವೂರ ಗ್ರಾಮ ಹಾಗೂ ಸೋನಾಮಾರ್ಗ್‌ನ ಎತ್ತರದ ಬೆಟ್ಟಗಳವರೆಗೆ ಕಾಶ್ಮೀರದ ಮೂಲೆಮೂಲೆಯಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವುದು ಒಂದೇ ಆತಂಕದ ಧ್ವನಿ ಅದೇನೆಂದರೆ ಹವಾಮಾನ ಬದಲಾವಣೆ ಮತ್ತು ಕ್ಷಣಾರ್ಧದಲ್ಲೇ ಬಂದೆರಗುವ 'ಮೇಘಸ್ಫೋಟ'ದ ಭೀತಿ.
ಕಳೆದ ಕೆಲವು ವಾರಗಳಿಂದ ಇಲ್ಲಿನ ಕುರಿಗಾಹಿಗಳು, ಗುಜ್ಜಾರ್-ಬಕರ್ವಾಲ್ ಬುಡಕಟ್ಟು ಸಮುದಾಯಗಳು, ಸೇಬು ಬೆಳೆಗಾರರು ಹಾಗೂ ಸ್ಥಳೀಯ ನಿವಾಸಿಗಳು ತಾವೆಂದೂ ಕಾಣದ ವಿಚಿತ್ರ ವಾತಾವರಣಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆಕಾಶದಲ್ಲಿ ಕಪ್ಪು ಮೋಡ ಕವಿದ ತಕ್ಷಣ, 'ಇನ್ನೇನು ಮೇಘಸ್ಫೋಟ ಸಂಭವಿಸಲಿದೆಯೇ?' ಎಂಬ ಭಯ ಪ್ರತಿಯೊಬ್ಬರಲ್ಲೂ ಮನೆಮಾಡುತ್ತಿದೆ.
ಕಣ್ಣೆದುರೇ ಕೊಚ್ಚಿಹೋದ ಬದುಕು: ಆವೂರ ಗ್ರಾಮದ ಕಣ್ಣೀರಿನ ಕಥೆ
ಸುಮಾರು ಮೂರು ವಾರಗಳ ಹಿಂದೆ ಆವೂರ ಗ್ರಾಮದ ಮೇಲ್ಭಾಗದಲ್ಲಿ ಸಂಭವಿಸಿದ ಮೇಘಸ್ಫೋಟ ಇಡೀ ಊರನ್ನೇ ಸರ್ವನಾಶಗೊಳಿಸಿದೆ. ಕಾಡಿನ ಮೇಲ್ಭಾಗದಿಂದ ಹರಿದು ಬಂದ ಮಣ್ಣು, ಕಲ್ಲು ಹಾಗೂ ನೀರಿನ ಮಹಾಪೂರವು ಮನೆ, ಹೋಟೆಲ್ ಹಾಗೂ ಕೃಷಿ ಭೂಮಿಗಳನ್ನು ಧ್ವಂಸಗೊಳಿಸಿದೆ.
'ಅಂದು ರಾತ್ರಿ ಸುಮಾರು 8.30 ಆಗಿರಬಹುದು, ಜೋರು ಮಳೆಯ ನಡುವೆ ಬೆಟ್ಟದಿಂದ ಭಯಾನಕ ಶಬ್ದ ಕೇಳಿಸಿತು. ಕಣ್ಣು ಮುಚ್ಚಿ ತೆಗೆಯುವವರಷ್ಟರಲ್ಲಿ ಬೃಹತ್ ಪ್ರಮಾಣದ ನೀರು ಮತ್ತು ಕೆಸರು ನಮ್ಮ ಮನೆಗೆ ನುಗ್ಗಿತು. ನಾವು ಉಟ್ಟ ಬಟ್ಟೆಯಲ್ಲೇ ಓಡಿ ಪ್ರಾಣ ಉಳಿಸಿಕೊಂಡೆವು' ಎಂದು ಮನೆ ಕಳೆದುಕೊಂಡ ಸ್ಥಳೀಯ ನಿವಾಸಿ ಫಾರೂಕ್ ಅಹ್ಮದ್ ಪೋಸ್ವಾಲ್ ವಿವರಿಸಿದ್ದಾರೆ.
ಗುಜ್ಜಾರ್ ಸಮುದಾಯದವರೇ ಹೆಚ್ಚಾಗಿರುವ ಈ ಹಳ್ಳಿಯಲ್ಲಿ ಜಾನುವಾರು ಸಾಕುವುದು, ಸಣ್ಣಪುಟ್ಟ ವ್ಯವಸಾಯ ಮತ್ತು ಪ್ರವಾಸೋದ್ಯಮವೇ ಜೀವನಾಧಾರ. ಆದರೆ ಈ ದುರಂತವು ಜೀವನಾಧಾರದ ಜಾನುವಾರುಗಳನ್ನು ಬಲಿಪಡೆದು, ಮೇವಿನ ಹುಲ್ಲುಗಾವಲನ್ನು ಮಣ್ಣುಪಾಲು ಮಾಡಿದೆ.
ಮೊಘಲ್ ರಸ್ತೆಯಿಂದ ಸೋನಾಮಾರ್ಗ್‌ವರೆಗೆ ಹರಡಿದ ಆತಂಕ
ಕೇವಲ ಒಂದು ಹಳ್ಳಿಯಷ್ಟೇ ಅಲ್ಲ, ಜಮ್ಮು-ಕಾಶ್ಮೀರದಾದ್ಯಂತ ಪರಿಸ್ಥಿತಿ ಭಿನ್ನವಾಗಿಲ್ಲ. ಬೆಟ್ಟದ ತೊರೆಗಳು ಇದ್ದಕ್ಕಿದ್ದಂತೆ ಆರ್ಭಟಿಸುವ ರಭಸಕ್ಕೆ ಸಾಕುಪ್ರಾಣಿಗಳು ಕೊಚ್ಚಿಹೋಗುತ್ತಿದ್ದು, ಕುರಿಗಾಹಿಗಳು ದಿಕ್ಕಾಪಾಲಾಗುತ್ತಿದ್ದಾರೆ. ಸಂಪರ್ಕ ರಸ್ತೆಗಳು ಕಡಿತಗೊಂಡ ಪರಿಣಾಮ ಪರಿಹಾರ ತಲುಪುವುದೂ ತಡವಾಗುತ್ತಿದೆ.
ಜುಲೈ-ಆಗಸ್ಟ್ ತಿಂಗಳಲ್ಲೂ ಅಕಾಲಿಕ ಹಿಮಪಾತ ಹಾಗೂ ಸತತ ಮಳೆಯಿಂದಾಗಿ ಹುಲ್ಲುಗಾವಲುಗಳು ನೀರುಪಾಲಾಗಿವೆ. ಬೇಸಿಗೆಯಲ್ಲಿ ಸಾಲ ಮಾಡಿ ಜಾನುವಾರುಗಳಿಗೆ ಮೇವು ಖರೀದಿಸಬೇಕಾದ ದುಸ್ಥಿತಿ ಎದುರಾಗಿದೆ. ಇದರಿಂದ ಬೇಸತ್ತ ಹೊಸ ತಲೆಮಾರಿನ ಯುವಕರು ಸಾಂಪ್ರದಾಯಿಕ ಅಲೆಮಾರಿ ಜೀವನವನ್ನೇ ತೊರೆಯುವ ಯೋಚನೆಯಲ್ಲಿದ್ದಾರೆ.
ವಿಜ್ಞಾನಿಗಳು ಮತ್ತು ತಜ್ಞರ ಎಚ್ಚರಿಕೆ
ವರದಿಗಳ ಪ್ರಕಾರ, ಕಳೆದ ಎರಡು ತಿಂಗಳುಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಘಸ್ಫೋಟದ ಘಟನೆಗಳು ದಾಖಲಾಗಿವೆ. ವಾತಾವರಣದ ತಾಪಮಾನ ಹೆಚ್ಚಾದಷ್ಟೂ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇದುವೇ ದಿಢೀರ್ ಹಾಗೂ ರಭಸದ ಮಳೆಗೆ ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.
ಅಂತರರಾಷ್ಟ್ರೀಯ ಸಮಗ್ರ ಹಿಮಾಲಯ ಅಭಿವೃದ್ಧಿ ಕೇಂದ್ರ (ICIMOD) ಪ್ರಕಾರ, ಪಶ್ಚಿಮ ಹಿಮಾಲಯ ಭಾಗದ ಜನವಸತಿ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ದಿಢೀರ್ ಪ್ರವಾಹ ಮತ್ತು ಕುಸಿತದ ಅಪಾಯ ಇನ್ನಷ್ಟು ಹೆಚ್ಚಾಗಲಿದೆ. ಇದನ್ನು ಎದುರಿಸಲು ಆಧುನಿಕ ಹವಾಮಾನ ಮುನ್ಸೂಚನೆ ಯಂತ್ರಗಳು ಹಾಗೂ ಸ್ಥಳೀಯ ಮಟ್ಟದ ಮುನ್ನೆಚ್ಚರಿಕಾ ವ್ಯವಸ್ಥೆ ತಕ್ಷಣವೇ ಜಾರಿಯಾಗಬೇಕಿದೆ.
ಕಳೆದುಹೋದ ನಂಬಿಕೆ
ತಲೆತಲಾಂತರಗಳಿಂದ ಈ ಬೆಟ್ಟಗಳ ವಾತಾವರಣ, ಮೋಡಗಳ ಚಲನೆಯನ್ನು ನೋಡಿಯೇ ಮಳೆ-ಬೆಳೆಯ ಲೆಕ್ಕಾಚಾರ ಹಾಕುತ್ತಿದ್ದ ಈ ಗಿರಿಜನರು, ಇಂದಿಗೂ ಅದೇ ಬೆಟ್ಟಗಳನ್ನು ನೋಡುತ್ತಿದ್ದಾರೆ. ಆದರೆ, ಮುಂದಿನ ಕ್ಷಣದಲ್ಲಿ ಆ ಬೆಟ್ಟಗಳು ತಮ್ಮ ಮೇಲೆ ಯಾವ ಕೋಪವನ್ನು ತೋರ್ಪಡಿಸುತ್ತವೆಯೋ ಎಂಬ ಭಯದಲ್ಲಿ ದಿನ ದೂಡುತ್ತಿದ್ದಾರೆ.

