ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಇನ್ ಇಂಡಿಯಾ' (Belonging: A Journey of Love in India) ಪುಸ್ತಕವನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆ 'ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ' ನಿರಾಕರಿಸಿದೆ ಎಂದು ವರದಿಯಾಗಿದೆ.
ಹಸ್ತಪ್ರತಿಯ ಒಂದು ಭಾಗದಲ್ಲಿ ಸಂಪಾದಕೀಯ ಬದಲಾವಣೆ ಮತ್ತು ಕೆಲವು ಭಾಗಗಳನ್ನು ತೆಗೆದುಹಾಕುವಂತೆ ಪ್ರಕಾಶಕರು ಕೋರಿದ್ದರು. ಆದರೆ, ಸೋನಿಯಾ ಗಾಂಧಿ ಅವರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಸೋನಿಯಾ ಗಾಂಧಿ ಮತ್ತು ಪ್ರಕಾಶಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಈ ಪುಸ್ತಕವನ್ನು ನವೆಂಬರ್ 10ರಂದು 'ಆಲ್ಫ್ರೆಡ್ ಎ ಕ್ನಾಫ್' (Alfred A Knopf) ಸಂಸ್ಥೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ನಾಫ್ ಸಂಸ್ಥೆಯು ಆರಂಭದಲ್ಲಿ 1 ಲಕ್ಷ ಪ್ರತಿಗಳನ್ನು ಮುದ್ರಿಸುವುದಾಗಿಯೂ ಘೋಷಿಸಿತ್ತು.
ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿರುವುದರಿಂದ 'ಹಾರ್ಪರ್ ಕಾಲಿನ್ಸ್' (HarperCollins) ಸಂಸ್ಥೆಯು ಭಾರತದಲ್ಲಿ ಈ ಪುಸ್ತಕವನ್ನು ಪ್ರಕಟಿಸುವ ಮತ್ತು ವಿತರಿಸುವ ಹಕ್ಕನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎನ್ನಲಾಗಿದೆ.
ಪುಸ್ತಕದಲ್ಲಿ 'ಸೋನಿಯಾ' ವೈಯಕ್ತಿಕ ವಿವರ
'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವು ಸೋನಿಯಾ ಗಾಂಧಿ ಅವರ ಬಾಲ್ಯದ ಇಟಲಿ ಜೀವನ, ಭಾರತಕ್ಕೆ ಅವರ ಆಗಮನ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹದ ಪಯಣವನ್ನು ಒಳಗೊಂಡಿದೆ ಎನ್ನಲಾಗಿದೆ.
ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವು ಸೇರಿದಂತೆ ಸೋನಿಯಾ ಅವರ ಜೀವನದ ಪ್ರಮುಖ ದುರಂತಗಳು, ಭಾರತದ ಪ್ರಮುಖ ರಾಜಕೀಯ ಕುಟುಂಬದಲ್ಲಿ ಕಳೆದ ದಿನಗಳು ಮತ್ತು ಸಾರ್ವಜನಿಕ ಜೀವನ ಕುರಿತಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿರಲಿದೆ.
2004ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳದಿರಲು ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಸೋನಿಯಾ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಪುಸ್ತಕ ಪ್ರಕಟಣೆ ಕುರಿತು ಈಚೆಗೆ ಮಾತನಾಡಿದ್ದ ಸೋನಿಯಾ ಗಾಂಧಿ, 'ನನ್ನ ಕುಟುಂಬದ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಆದರೆ, ನಮ್ಮ ಕುಟುಂಬದವರು ತೆಗೆದುಕೊಂಡ ನಿರ್ಧಾರಗಳು ಮತ್ತು ಮಾನವೀಯ ಕುಂದುಕೊರತೆಗಳ ಹಿಂದಿನ ನೈಜ ಸತ್ಯವನ್ನು ತಲುಪಲು ಕೆಲವೇ ಬರಹಗಳಿಗೆ ಮಾತ್ರ ಸಾಧ್ಯವಾಗಿದೆ. ನನ್ನ ಈ ಕಥೆಯು ಆರು ದಶಕಗಳಿಂದ ನಾನು ಕಂಡ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ವಿಶಿಷ್ಟ ದೃಷ್ಟಿಕೋನವನ್ನು ಓದುಗರಿಗೆ ನೀಡುತ್ತದೆ' ಎಂದು ಹೇಳಿದ್ದರು.
ಕುಟುಂಬದ ಕಥೆ ಹೇಳಲಿರುವ ಆತ್ಮಕಥೆ: ರಾಹುಲ್
ತಂದೆ ರಾಜೀವ್ ಗಾಂಧಿ ಅವರ 82ನೇ ಜನ್ಮದಿನದ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸುವಾಗ ರಾಹುಲ್ ಗಾಂಧಿ ಅವರು ತಾಯಿಯ (ಸೋನಿಯಾ) ಆತ್ಮಕಥೆಯ ಬಗ್ಗೆ ಮಾತನಾಡಿದ್ದರು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ನಂತರದ ದಿನಗಳನ್ನು ಮೆಲುಕು ಹಾಕಿದ್ದರು.
'ಪಪ್ಪಾ (ಅಪ್ಪ) ನಮ್ಮನ್ನು ಅಗಲಿದ ದಿನದಿಂದ, ಜೀವನದಲ್ಲಿ ಎದುರಾದ ಪ್ರತಿಯೊಂದು ಸವಾಲನ್ನು ನೀವು (ಸೋನಿಯಾ ಗಾಂಧಿ) ಅಪಾರ ಧೈರ್ಯ ಮತ್ತು ಗೌರವದಿಂದ ಎದುರಿಸಿದ್ದನ್ನು ನಾನು ನೋಡಿದ್ದೇನೆ. ನೀವು ಅನುಭವಿಸಿದ ಕಷ್ಟಗಳು ಮತ್ತು ಪಪ್ಪಾ ನಿಧನದ ನಂತರ ನಿಮ್ಮ ಜೀವನ ಎಷ್ಟು ಕಷ್ಟಕರವಾಗಿತ್ತು ಎಂಬುದು ನನಗೂ ಮತ್ತು ಪ್ರಿಯಾಂಕಾಗೆ ಮಾತ್ರ ಗೊತ್ತು' ಎಂದು 'ಎಕ್ಸ್'ನಲ್ಲಿ ಬರೆದುಕೊಂಡಿದ್ದರು.
'ನಮ್ಮನ್ನು ಬೆಂಬಲಿಸಿದ ಕೋಟ್ಯಂತರ ಜನರೊಂದಿಗೆ ಜೀವನದ ಕಥೆಯನ್ನು ಹಂಚಿಕೊಳ್ಳಲು ಸೋನಿಯಾ ಗಾಂಧಿ ನಿರ್ಧರಿಸಿದ್ದಕ್ಕೆ ಹೆಮ್ಮೆ ಆಗುತ್ತಿದೆ. ಗೌಪ್ಯತೆಯನ್ನು ಬಯಸುವ ನಿಮ್ಮಂತಹ ವ್ಯಕ್ತಿಗೆ ನಿಮ್ಮ ಸುಂದರವಾದ ಕಥೆಯನ್ನು ಜಗತ್ತಿಗೆ ಹೇಳುವುದು ಎಷ್ಟು ಕಷ್ಟಕರವಾಗಿತ್ತು ಎಂದು ನನಗೆ ತಿಳಿದಿದೆ. ತಂದೆಯವರು (ರಾಜೀವ್ ಗಾಂಧಿ) ಸ್ವರ್ಗದಿಂದಲೇ ಹಸನ್ಮುಖಿಯಾಗಿ ಸೋನಿಯಾ ಅವರನ್ನು ಹೆಮ್ಮೆಯಿಂದ ನೋಡುತ್ತಿರಬಹುದು' ಎಂದು ರಾಹುಲ್ ಹೇಳಿದ್ದರು.

