ನವದೆಹಲಿ (PTI): ಜಾತಿಯ ಬದಲಿಗೆ ಆರ್ಥಿಕ ಮಾನದಂಡ ಅನುಸರಿಸಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ 'ಮೀಸಲಾತಿ ತೊಲಗಿಸಿ ಆಂದೋಲನ' ನಡೆಸುತ್ತಿರುವ ಹೋರಾಟಗಾರರನ್ನು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಗುರುವಾರ ಭೇಟಿಯಾದರು.
ಇನ್ಸ್ಟಾಗ್ರಾಮ್ನ ಪೇಜ್ನಲ್ಲಿ 'ಮೀಸಲಾತಿ ತೊಲಗಿಸಿ ಆಂದೋಲನ'ಕ್ಕೆ ಕರೆ ನೀಡಲಾಗಿತ್ತು.
ಆಗಸ್ಟ್ 21ರಂದು ಜಂತರ್-ಮಂತರ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದ ಕಾರಣ, ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
'ಹರ್ಷ್ ದುಬೆ, ರಣ್ ಬಹಾದ್ದೂರ್ ಸಿಂಗ್ ಚೌಹಾಣ್, ಮೃತ್ಯುಂಜಯ್ ಪಾಠಕ್ ಸೇರಿದಂತೆ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದ ತಂಡದ ಜೊತೆಗೆ ಸೌಹಾರ್ದ ಸಭೆ ನಡೆಸಲಾಗಿದೆ' ಎಂದು ನಡ್ಡಾ ಅವರು 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ. 'ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ಸಭೆ ನಡೆಸಿದ್ದು, ಆದಷ್ಟು ಬೇಗ ಮತ್ತೊಮ್ಮೆ ಸಭೆ ನಡೆಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

