ನವದೆಹಲಿ: ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) 'ಡ್ರಗ್ ಇನ್ಸ್‌ಪೆಕ್ಟರ್' ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆಶ್ಚರ್ಯಕರ ಸಂಗತಿಗಳು ಹೊರಬರುತ್ತಿವೆ. ಈ ಪ್ರಕರಣದ ಹಿಂದೆ ಒಂದು ಪ್ರೇಮ ವೈಫಲ್ಯದ ಕಥೆಯೂ ಇದೆ. ಪ್ರೇಮಿಗಳಿಬ್ಬರ ನಡುವಿನ ಜಗಳವೇ ಈ ಭಾರಿ ಅಕ್ರಮ ಜಾಲವನ್ನು ಪೋಲಿಸರ ಮುಂದೆ ಬಯಲು ಮಾಡಿದೆ.
ಪ್ರೇಯಸಿ ತನ್ನಿಂದ ದೂರವಾಗಿದ್ದಕ್ಕೆ ರೊಚ್ಚಿಗೆದ್ದ ಪ್ರಿಯತಮ ಗೌರವ್ ಪಾಟೀಲ್ ಎಂಬಾತ ಪೊಲೀಸರಿಗೆ ಇಮೇಲ್ ಮಾಡುವ ಮೂಲಕ ಈ ಹಗರಣವನ್ನು ಬಹಿರಂಗಪಡಿಸಿದ್ದಾನೆ.
ಪ್ರೇಮ ವೈಫಲ್ಯ ಅಕ್ರಮ ಬಯಲು ಮಾಡಿದ್ದು ಹೇಗೆ?
ಪರೀಕ್ಷಾರ್ಥಿ ಋತುಜಾ ಪಾಟೀಲ್ ಅವರ ತಂದೆ ಅಮೃತ್ ಪಾಟೀಲ್, ನಂದೂರ್ಬಾರ್‌ನ ಕೋಚಿಂಗ್ ಸೆಂಟರ್ ಮಾಲೀಕ ಪ್ರವೀಣ್ ಪಾಟೀಲ್ ಎಂಬಾತನಿಂದ ₹5 ಲಕ್ಷ ನೀಡಿ ಎರಡು ದಿನ ಮುಂಚಿತವಾಗಿ (ಮಾರ್ಚ್ 20) ಪ್ರಶ್ನೆಪತ್ರಿಕೆ ಪಡೆದಿದ್ದರು. ಆ ಪ್ರಶ್ನೆಪತ್ರಿಕೆಯನ್ನು ಋತುಜಾ ತನ್ನ ಪ್ರೇಮಿ ಗೌರವ್‌ಗೆ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಳು.
ಪರೀಕ್ಷೆಯಲ್ಲಿ ಋತುಜಾ ಪಾಸ್, ಗೌರವ್ ಫೇಲ್:
ಮಾರ್ಚ್ 22ರಂದು ನಡೆದ ಪರೀಕ್ಷೆಯಲ್ಲಿ ಋತುಜಾ ಉತ್ತಮ ಅಂಕ ಗಳಿಸಿ ಆಯ್ಕೆಯಾದಳು, ಆದರೆ ಗೌರವ್ ಆಯ್ಕೆಯಾಗಿರಲಿಲ್ಲ. ಪರೀಕ್ಷೆ ಮುಗಿದು ಫಲಿತಾಂಶ ಬಂದ ನಂತರ, ಋತುಜಾ ಕುಟುಂಬದವರು ಇವರ ಮದುವೆಗೆ ಒಪ್ಪಿರಲಿಲ್ಲ. ಇದರಿಂದ ಋತುಜಾ ತನ್ನ ಪ್ರೇಮಿ ಗೌರವ್ ಪಾಟೀಲ್‌ನೊಂದಿಗೆ ಸಂಬಂಧ ಕಡಿದುಕೊಂಡಿದ್ದಳು.
ಇದರಿಂದ ಆಕ್ರೋಶಗೊಂಡ ಗೌರವ್, ಪರೀಕ್ಷಾ ಅಕ್ರಮದ ಬಗ್ಗೆ (ಪ್ರಶ್ನೆ ಪತ್ರಿಕೆ ಸಿಕ್ಕಿದ್ದ ರಹಸ್ಯ) ಪೊಲೀಸರಿಗೆ ಇಮೇಲ್ ದೂರು ನೀಡಿದ್ದಾನೆ. ಪೊಲೀಸರು ತನಿಖೆ ತೀವ್ರಗೊಳಿಸಿದಾಗ ತಾನು ಸಿಕ್ಕಿಬೀಳುವ ಭಯದಿಂದ ಗೌರವ್ ದೂರು ಹಿಂಪಡೆಯಲು ಯತ್ನಿಸಿದರೂ, ಆಷ್ಟರಲ್ಲಾಗಲೇ ತನಿಖೆ ತೀವ್ರಗೊಂಡಿತ್ತು.
ಅಧಿಕಾರಿಗಳೇ ಶಾಮೀಲು: 6 ಜನರ ಬಂಧನ
ಎಂಪಿಎಸ್‌ಸಿ ಕಚೇರಿಯಲ್ಲಿದ್ದ ಸಹಾಯಕ ವಿಭಾಗಾಧಿಕಾರಿ ವಿಶ್ವೇಶ್ವರ ನಕಟೆ ಪ್ರಶ್ನೆಗಳನ್ನು ಕದ್ದು, ಉಪ ಕಾರ್ಯದರ್ಶಿ ಅಭೀಜಿತ್ ಲೆಂಡ್ವೆ ಹಾಗೂ ಸಹಾಯಕ ವಿಭಾಗಾಧಿಕಾರಿ ಗೋಪಾಲ್ ಮರಾಠೆಗೆ ನೀಡಿದ್ದರು. ಅಲ್ಲಿಂದ ಕೋಚಿಂಗ್ ಸೆಂಟರ್ ಮಾಲೀಕ ಪ್ರವೀಣ್ ಪಾಟೀಲ್ ಮೂಲಕ ಋತುಜಾ ತಂದೆಗೆ ಮಾರಾಟ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿಎಸ್‌ಸಿಯ ಮೂವರು ಅಧಿಕಾರಿಗಳು, ಕೋಚಿಂಗ್ ಸೆಂಟರ್ ಮಾಲೀಕ, ಋತುಜಾಳ ತಂದೆ ಹಾಗು ದೂರು ನೀಡಿದ್ದ ಗೌರವ್ ಪಾಟೀಲ್ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಸದ್ಯ ಇವರನ್ನು , ಸೆಪ್ಟೆಂಬರ್ 2 ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
ನೇಮಕ ಪ್ರಕ್ರಿಯೆ ರದ್ದು:
ಅಕ್ರಮ ದೃಢಪಟ್ಟ ಹಿನ್ನೆಲೆಯಲ್ಲಿ ಎಂಪಿಎಸ್‌ಸಿ ಇಡೀ ನೇಮಕ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಮಾರ್ಚ್ 22 ರಂದು ನಡೆದಿದ್ದ ಪರೀಕ್ಷೆಯಲ್ಲಿ 488 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಇದೀಗ ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಶೀಘ್ರದಲ್ಲೇ ಮರುಪರೀಕ್ಷೆ ನಡೆಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

