ನವದೆಹಲಿ: ಬೆಳೆ ನಾಶವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಆನೆ ಕಾರಿಡಾರ್‌ಗೆ ಅಡ್ಡಿಪಡಿಸುವಂತಿಲ್ಲ ಎಂದು ಸೋಮವಾರ ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್, ವನ್ಯಜೀವಿಗಳ ಸಂಚಾರಕ್ಕೆ ಅಡೆತಡೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರಿದ್ದ ಪೀಠ, 'ವನ್ಯಜೀವಿಗಳ ಹಾದಿಗೆ ಅಡ್ಡಿಪಡಿಸುವಂತಿಲ್ಲ ಎಂಬ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ.
ಆನೆಗಳ ಹಿಂಡು ದೂರದವರೆಗೆ ಸಂಚರಿಸುವ ಅಭ್ಯಾಸವನ್ನು ಹೊಂದಿವೆ. ಕೇವಲ ಬೆಳೆ ಹಾನಿಯಾಗುತ್ತದೆ ಎಂಬ ಕಾರಣ ಹೇಳಿ, ಯಾವುದೇ ರಾಜ್ಯವೂ ಆನೆಗಳ ಮಾರ್ಗಕ್ಕೆ ತಡೆಯೊಡ್ಡಬಾರದು' ಎಂದು ಹೇಳಿದೆ.
ಎಲ್ಲ ರಾಜ್ಯಗಳಲ್ಲಿರುವ ಆನೆಗಳ ಕಾರಿಡಾರ್ ಕುರಿತು ಹೊಸದಾಗಿ ಸಮೀಕ್ಷೆ ನಡೆಸಿ, ಸದ್ಯ ಇರುವ ಅಡೆತಡೆಗಳು ಹಾಗೂ ವನ್ಯಜೀವಿಗಳ ಸುಗಮ ಸಂಚಾರ ಖಾತ್ರಿಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರವಾದ ವರದಿ ತಯಾರಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ವಿವಿಧ ರಾಜ್ಯಗಳ ಮೂಲಕ ಹಾದುಹೋಗುವ ಆನೆ ಕಾರಿಡಾರ್‌ಗಳಲ್ಲಿ ಯಾವುದೇ ತಡೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಹೊರಡಿಸಿದ ಕಡ್ಡಾಯ ಮಾರ್ಗಸೂಚಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ಇದೆ. ಆದಾಗ್ಯೂ, ಕೆಲವೆಡೆ ಸ್ಥಳೀಯ ಕಾರಣಗಳಿಂದಾಗಿ, ಕಾರಿಡಾರ್‌ಗೆ ತಡೆ ಎದುರಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಆನೆ ಕಾರಿಡಾರ್‌ಗಳಿಗೆ ಇರುವ ತಡೆಗಳ ನಿವಾರಣೆಗೆ ಕೈಗೊಂಡ ಉಪಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಆನೆಗಳ ವಿರುದ್ಧ ಬಳಸುವ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ನಿಲುವು ಸೂಚಿಸುವಂತೆಯೂ ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿಚಾರಣೆಯನ್ನು ಆರು ವಾರಗಳವರೆಗೆ ಮುಂದೂಡಲಾಗಿದೆ.

