ನವದೆಹಲಿ: ಲೋಕಸಭೆ ಹಾಗೂ ಮುಂಬರುವ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿಯು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಸೋಮವಾರ ಘೋಷಿಸಿದೆ.
ನಿತಿನ್ ನವೀನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಏಳು ತಿಂಗಳುಗಳ ಬಳಿಕ ರಾಷ್ಟ್ರೀಯ ಸಂಘಟನೆಯ ಪುನರ್ ರಚನೆ ಮಾಡಲಾಗಿದೆ.
ನಿತಿನ್ ಅವರ ತಂಡದಲ್ಲಿ 12 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಪಕ್ಷದ ಸಾಮಾಜಿಕ ಸಮೀಕರಣಕ್ಕೆ ಅನುಗುಣವಾಗಿ ವಿವಿಧ ಜಾತಿಗಳು ಹಾಗೂ ಬುಡಕಟ್ಟುಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶಕ್ಕೆ ಈ ನೇಮಕದಲ್ಲಿ ಸಿಂಹಪಾಲು ನೀಡಲಾಗಿದ್ದು, ರಾಜ್ಯದ ಎಂಟು ಮಂದಿಯನ್ನು ರಾಷ್ಟ್ರೀಯ ಪದಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷವು ಮನ್‌ಪ್ರೀತ್ ಬಾದಲ್, ಸಂದೀಪ್ ಪಾಠಕ್ ಮತ್ತು ತರುಣ್ ಚುಗ್ ಅವರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿದೆ.
ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಈ ಹಿಂದೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಮಾಧವ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 2019ರಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿರುವ ಬಿ.ಎಲ್.ಸಂತೋಷ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿದೆ.
ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರಿಗೆ ಖಜಾಂಚಿಯ ಹೊಣೆ ನೀಡಲಾಗಿದೆ. ಅವರು 2010ರಿಂದ 2014ರ ವರೆಗೆ ಇದೇ ಹುದ್ದೆಯಲ್ಲಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪೈಕಿ, ವಿನೋದ್ ತಾವ್ಡೆ ಹಾಗೂ ಸುನಿಲ್ ಬನ್ಸಾಲ್ ಮಾತ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿಪ್ಲಬ್ ಕುಮಾರ್ ದೇಬ್ ಮತ್ತು ತಿರತ್ ಸಿಂಗ್ ರಾವತ್ ಅವರನ್ನು ಕ್ರಮವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಹೊಸ ತಂಡದಲ್ಲಿರುವ ಇಬ್ಬರು ಮುಸ್ಲಿಂ ಮುಖಗಳು ಉತ್ತರ ಪ್ರದೇಶದವರೇ ಆಗಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಕುಲಪತಿ ತಾರಿಕ್ ಮನ್ಸೂರ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೀರಠ್‌ನ ಕುನ್ವರ್ ಬಸಿತ್ ಅಲಿ ಅವರನ್ನು ಪಕ್ಷದ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಪ್ರೊ.ಎಂ.ನಾಗರಾಜ ರಾಷ್ಟ್ರೀಯ ಉಪಾಧ್ಯಕ್ಷ
ಕುರುಬ ಸಮುದಾಯಕ್ಕೆ ಸೇರಿದ, ಕರ್ನಾಟಕದ ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಬಿಜೆಪಿ ನೇಮಕ ಮಾಡಿದೆ.
ಕಾಂಗ್ರೆಸ್ ಪಕ್ಷವು ಕುರುಬ ಸಮುದಾಯದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದಎರಡು ತಿಂಗಳ ಹಿಂದೆ ಕೆಳಕ್ಕೆ ಇಳಿಸಿತ್ತು. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಬಿಜೆಪಿ ನೆರವಿನಿಂದ ಇನ್ನೊಂದು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೆ, ಪ್ರೊ.ಎಂ.ನಾಗರಾಜ ಅವರಿಗೆ ಪಕ್ಷ ಮಣೆ ಹಾಕಿತ್ತು. ಇದೀಗ, ಪಕ್ಷವು ಅವರಿಗೆ ಮತ್ತೊಂದು ಬಡ್ತಿ ನೀಡಿದೆ. ರಾಷ್ಟ್ರೀಯ ಪದಾಧಿಕಾರಿಗಳ ತಂಡದಲ್ಲಿರುವ ಕರ್ನಾಟಕದ ಏಕೈಕ ಪ್ರತಿನಿಧಿ ಇವರು. ಧಾರವಾಡದವರಾದ ಪ್ರೊ. ಎಂ.ನಾಗರಾಜ ಅವರು ದೀರ್ಘ ಕಾಲ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಆರ್‌ಎಸ್‌ಎಸ್ ಮತ್ತು ಎಬಿವಿಪಿ ಕಾರ್ಯಕರ್ತರಾಗಿದ್ದರು. ಬಿಜೆಪಿ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಕೆಪಿಎಸ್‌ಸಿ ಸದಸ್ಯರಾಗಿದ್ದರು.
ಪಕ್ಷದ ಸಾಮಾಜಿಕ ಮಾಧ್ಯಮ (ಐಟಿ) ವಿಭಾಗದ ಮುಖ್ಯಸ್ಥರನ್ನಾಗಿ ದೀಪಕ್ ಮ್ಹಸ್ಕೆ ಅವರನ್ನು ನೇಮಿಸಲಾಗಿದೆ. 11 ವರ್ಷಗಳಿಂದ ಪಕ್ಷದ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಮುನ್ನಡೆಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಕೈಬಿಡಲಾಗಿದೆ. ದೀಪಕ್ ಅವರು ಛತ್ತೀಸಗಢದ ರಸಾಯನ ವಿಜ್ಞಾನ ಪ್ರಾಧ್ಯಾಪಕರು. ಅವರು ಪಕ್ಷದ ವಲಯದಲ್ಲಿ ಹೆಚ್ಚು ಪರಿಚಿತರಲ್ಲ. 'ಪಕ್ಷವು ಹೊಸ ಎತ್ತರಕ್ಕೆ ಏರಲು ಮತ್ತು ದೇಶದ ಮೂಲೆ ಮೂಲೆಗೆ ತನ್ನ ಸಂಘಟನೆ ವಿಸ್ತರಿಸಲು ಸಿದ್ಧವಾಗುತ್ತಿರುವ ನಿರ್ಣಾಯಕ ಹಂತದಲ್ಲಿ ಈ ನೇಮಕಾತಿ ನಡೆದಿದೆ' ಎಂದು ಮಾಳವೀಯಾ 'ಎಕ್ಸ್'ನಲ್ಲಿ ಹೇಳಿದ್ದಾರೆ.ಮಾಳವೀಯಾಗೆ ಗೇಟ್ ಪಾಸ್
ಈ ತಿಂಗಳಲ್ಲೇ ಸಂಪುಟ ಪುನರ್‌ರಚನೆ
ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಈ ತಿಂಗಳಲ್ಲೇ ನಡೆಯುವ ಸಂಭವ ಇದೆ. ಇದೇ 21 ಅಥವಾ 28ಕ್ಕೆ ಪುನರ್ ರಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ರಾಷ್ಟ್ರಪತಿ ಭವನಕ್ಕೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಸಂಪುಟಕ್ಕೆ ಇಬ್ಬರು ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷರಾಗಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ದೆಹಲಿ ಘಟಕದ ಅಧ್ಯಕ್ಷರಾಗಿ ಕೇಂದ್ರ ಸಚಿವ ಹರ್ಷ್ ಮಲ್ಹೊತ್ರಾ ಅವರನ್ನು ನೇಮಿಸಲಾಗಿದೆ. ಹೀಗಾಗಿ, ಇವರಿಬ್ಬರು ಸಂಪುಟದಿಂದ ಹೊರಕ್ಕೆ ಹೋಗಲಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ವಿಧಾನಸಭೆಗಳ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ದೊಡ್ಡ ಮಟ್ಟದಲ್ಲಿ ಸಂಪುಟಕ್ಕೆ ಸರ್ಜರಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

