HEALTH TIPS

ಕ್ಯಾಂಪಸ್ ಟು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ: ಹೇಮಾಂಗ್ ರೋಚಕ ಹಾದಿ..

ನವದೆಹಲಿ: ಭಾರತದಾದ್ಯಂತ 'ಜೆನ್ ಝೀ' ಪ್ರತಿಭಟನೆಗಳು ಮತ್ತು ಯುವಜನ ಚಳವಳಿಗಳು ರಾಷ್ಟ್ರೀಯ ಗಮನ ಸೆಳೆಯುತ್ತಿರುವ ಈ ಸಂದರ್ಭದಲ್ಲೇ ಬಿಜೆಪಿ ಒಂದು ಪ್ರಮುಖ ಸಾಂಸ್ಥಿಕ ಬದಲಾವಣೆ ಮಾಡಿದೆ. ಸಂಸದ ತೇಜಸ್ವಿ ಸೂರ್ಯ ಅವರ ಬದಲಿಗೆ ವಡೋದರಾ ಸಂಸದ ಹೇಮಾಂಗ್ ಜೋಶಿ ಅವರನ್ನು 'ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ'ದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 


35 ವರ್ಷದ ಹೇಮಾಂಗ್ ಈ ಉನ್ನತ ಹುದ್ದೆಗೆ ಏರುವುದರ ಹಿಂದೆ ಅವರ ಕಠಿಣ ಪರಿಶ್ರಮ ಕಾಣುತ್ತದೆ. ಕಾಲೇಜು ಕ್ಯಾಂಪಸ್‌ನಿಂದ ಯುವ ಮೋರ್ಚಾ ಅಧ್ಯಕ್ಷರಾಗುವವರೆಗೆ ಅವರ ಸಂಘಟನಾ ಚತುರತೆ, ಹಂತ ಹಂತವಾಗಿ ವೇಗವಾಗಿ ಬೆಳೆದು ಬಂದ ರೀತಿ ಗಮನ ಸೆಳೆಯುತ್ತದೆ.

ಕಾಲೇಜು ಕ್ಯಾಂಪಸ್‌ನಿಂದ ಸಂಘಟನೆ ಆರಂಭ

ಜೋಶಿ ಅವರು ಬಿಜೆಪಿಯ ಯುವ ಶಾಸಕರ ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಅವರ ಸಾರ್ವಜನಿಕ ಸೇವೆಯ ಪಯಣವು ವಡೋದರದಿಂದ ಆರಂಭವಾಗಿದೆ.

ಫಿಸಿಯೋಥೆರಪಿಯಲ್ಲಿ ಉನ್ನತ ವ್ಯಾಸಂಗಕ್ಕಾಗಿ 2008ರಲ್ಲಿ ಜೋಶಿಯವರು ತಂದೆ ಜೊತೆ ವಡೋದರಕ್ಕೆ ಸ್ಥಳಾಂತರಗೊಂಡಿದ್ದರು. ಪ್ರತಿಷ್ಠಿತ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಸೇರಿದ ಅವರು 2008ರಿಂದ 2021ರವರೆಗೆ ವಿಶ್ವವಿದ್ಯಾಲಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 2022ರ ಜನವರಿಯಲ್ಲಿ ಅಂದಿನ ನಗರ ಘಟಕದ ಅಧ್ಯಕ್ಷ ಡಾ. ವಿಜಯ್ ಶಾ ಅವರ ನೇತೃತ್ವದಲ್ಲಿ ವಡೋದರಾ ಮಹಾನಗರ ಪಾಲಿಕೆಯ ಶಾಲಾ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಳ್ಳುವ ಮೂಲಕ ರಾಜಕೀಯ ಪಯಣ ಆರಂಭಿಸಿದ್ದರು.

ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ

ಕಳೆದ ಎರಡು ವರ್ಷಗಳಿಂದ ಪಕ್ಷದಲ್ಲಿ ಜೋಶಿ ಅವರು ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದ್ದಾರೆ. 2024ರ ಏಪ್ರಿಲ್‌ನಲ್ಲಿ ಪಕ್ಷದ ನಾಯಕತ್ವವು ಅವರನ್ನು ವಡೋದರಾದಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಮೊದಲ ಪ್ರಯತ್ನದಲ್ಲೇ ಗೆದ್ದು ಅವರು ಲೋಕಸಭೆ ಪ್ರವೇಶಿಸಿದರು. ಅವರ ಸಾಮರ್ಥ್ಯವನ್ನು ಗುರುತಿಸಿದ ಪಕ್ಷವು 2025ರ ಮೇನಲ್ಲಿ 'ಆಪರೇಷನ್ ಸಿಂಧೂರ' ಕುರಿತು ವಿವರಿಸಲು ವಿದೇಶಗಳಿಗೆ ಕಳುಹಿಸಲಾಗಿದ್ದ ನಿಯೋಗದಲ್ಲಿ ಗುಜರಾತ್‌ನಿಂದ ಏಕೈಕ ಸಂಸದರಾಗಿ ಹೇಮಾಂಗ್ ಅವರನ್ನು ಸೇರಿಸಿತ್ತು. 2025ರ ನವೆಂಬರ್‌ನಲ್ಲಿ ಬಿಜೆಪಿ ಅವರಿಗೆ ಗುಜರಾತ್‌ನ 'ವಿಶೇಷ ಹೂಡಿಕೆ ವಲಯ'ದ ಉಸ್ತುವಾರಿ ಜವಾಬ್ದಾರಿ ನೀಡಿತ್ತು. ನಂತರ ಅದೇ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಅವಧಿಯಲ್ಲಿ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯು ಅವರನ್ನು ಪಕ್ಷದ ಯುವ ಘಟಕದ ಅಧ್ಯಕ್ಚರನ್ನಾಗಿ ರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಕಾರಣವಾಗಿದೆ.

ಹೇಮಾಂಗ್ ನಾಯಕತ್ವದ ಶೈಲಿ, ಕಾರ್ಯತಂತ್ರ ಮೆಚ್ಚಿದ ವರಿಷ್ಠರು

ಹೇಮಾಂಗ್ ಜೋಶಿ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಿಜೆಪಿ ನಿರ್ಧಾರವು ಅವರ ನಾಯಕತ್ವದ ಶೈಲಿಯ ಮೌಲ್ಯಮಾಪನ, ರಾಜಕೀಯ ಚತುರತೆ ಮತ್ತು ಕಾರ್ಯತಂತ್ರದ ಅಂಶಗಳ ಮೇಲೆ ಆಧಾರಿತವಾಗಿದೆ.

ಸಂಸದರಾದಾಗಿನಿಂದಲೂ ಹೇಮಾಂಗ್ ತಮ್ಮ ವ್ಯಕ್ತಿತ್ವ ವಿಕಸನದತ್ತ ಗಮನಹರಿಸಿದ್ದಾರೆ. ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ, 'ಆಪರೇಷನ್ ಸಿಂಧೂರ' ನಿಯೋಗದಲ್ಲಿ ಸ್ಥಾನ ಸೇರಿದಂತೆ ತಮಗೆ ವಹಿಸಿದ ಎಲ್ಲ ಜವಾಬ್ದಾರಿಗಳಲ್ಲಿ ಸ್ಥಿರವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದಾರೆ.

ಗುಜರಾತ್‌ನಲ್ಲಿ ಯುವ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಬೃಹತ್ ಪ್ರಮಾಣದ ಡಿಜಿಟಲ್ ಸಭೆ ಸೇರಿದಂತೆ ಹೊಸ ಸಾಂಸ್ಥಿಕ ಕಾರ್ಯವಿಧಾನಗಳನ್ನು ಜಾರಿಗೆ ತಂದಿದ್ದರು. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಗಮನವನ್ನು ನೇರವಾಗಿ ಸೆಳೆದಿತ್ತು.

ಕೇಂದ್ರ ನಾಯಕತ್ವವು ಉತ್ತಮ ವಿದ್ಯಾರ್ಹತೆ ಹೊಂದಿರುವ, ಮೃದು ಸ್ವಭಾವದ ಮತ್ತು ಯಾವುದೇ ವಿವಾದಗಳಿಲ್ಲದ ಯುವ ನಾಯಕನ ಹುಡುಕಾಟದಲ್ಲಿತ್ತು. ಈ ಸಂದರ್ಭ ಅವರ ಕಣ್ಣಿಗೆ ಬಿದ್ದಿದ್ದು ಹೇಮಾಂಗ್. ಜೋಶಿ ಅವರು ಈ ಮಾನದಂಡಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವುದಲ್ಲದೆ, ಪ್ರಚಾರದ ಅಬ್ಬರವಿಲ್ಲದ ಸರಳ ಕಾರ್ಯಶೈಲಿಯನ್ನೂ ಕಾಯ್ದುಕೊಂಡು ಬಂದಿದ್ದರಿಂದ ಅವರಿಗೆ ಈ ಉನ್ನತ ಹುದ್ದೆ ಲಭಿಸಿದೆ.

ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತ

ಅತ್ಯುತ್ತಮ ಸಂವಹನ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ಜೋಶಿ ಅವರು ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಈ ಸಾಮರ್ಥ್ಯವು ದೇಶದಾದ್ಯಂತದ ವೈವಿಧ್ಯಮಯ ಯುವ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ನೆರವಾಗುತ್ತದೆ ಎಂದು ಹೈಕಮಾಂಡ್ ನಂಬಿದೆ. ತಂತ್ರಜ್ಞಾನದ ಬಗ್ಗೆಯೂ ಅವರಿಗೆ ಆಳವಾದ ಜ್ಞಾನವಿದ್ದು, ವಡೋದರಾದಲ್ಲಿ 'ಡಿಜಿಟಲ್ ಸಂಸದರ ಕಚೇರಿ'ಯನ್ನು ಸ್ಥಾಪಿಸಿದ ಅವರ ಉಪಕ್ರಮವು ಎದ್ದು ಕಾಣುತ್ತಿದೆ. ಅವರ ಈ ಕಾರ್ಯವು ವ್ಯಾಪಕ ಮನ್ನಣೆ ಗಳಿಸಿದೆ. 2024ರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ಸಂಸದ ಪಿ.ಸಿ. ಸಾರಂಗಿ ಅವರ ನಡುವೆ ನಡೆದ ಘಟನೆಯ ಸಂದರ್ಭದಲ್ಲಿ ಜೋಶಿ ರಾಷ್ಟ್ರೀಯ ರಾಜಕೀಯದ ಗಮನ ಸೆಳೆದರು. ಬನ್ಸೂರಿ ಸ್ವರಾಜ್ ಮತ್ತು ಅನುರಾಗ್ ಠಾಕೂರ್ ಅವರೊಂದಿಗೆ ಸೇರಿ ಘರ್ಷಣೆಯ ಕುರಿತು ಪೊಲೀಸ್ ದೂರು ದಾಖಲಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದರು.

ಯುವಜನತೆಯೊಂದಿಗೆ ಪಕ್ಷದ ತಳಮಟ್ಟದ ಸಂಪರ್ಕವನ್ನು ಬಲಪಡಿಸುವುದು ಮತ್ತು ದೇಶದಾದ್ಯಂತ ಜೆನ್ ಝೀಯ ಬದಲಾಗುತ್ತಿರುವ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಈಗ ಹೇಮಾಂಗ್ ಜೋಶಿ ಅವರ ಮೇಲಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries