ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ನಡೆಯಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಪೆರ್ಲದ ಪಡ್ರೆಸಭಾ ಭವನದಲ್ಲಿ ಜರುಗಿತು.
ಸಂಘಟನೆ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶೀನಪೂಜಾರಿ ಅಲಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಶಿಕ್ಷಣದಿಂದ ಬಲಯುತರಾಗಿ ಎಂಬ ಗುರುವಾಕ್ಯ ಪರಿಪಾಲಿಸುವುದರ ಜತೆಗೆ ವಿದ್ಯಾರ್ಥಿಗಳು ಕಠಿಣ ಅಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ವೃತ್ತಿ ಕಂಡುಕೊಳ್ಳುವ ಮೂಲಕ ತಮ್ಮ ಜೀವನಕ್ಕೆ ಭದ್ರ ಬುನಾದಿಹಾಕಿಕೊಳ್ಳಬೇಕು. ಜೀವನವನ್ನು ದುರ್ಬಲಗೊಳಿಸುವುದರ ಜತೆಗೆ ಸಾಮಾಜಿಕ ಅಧ:ಪತನಕ್ಕೆ ಕಾರಣವಾಗಬಲ್ಲ ಮಾದಕ ದ್ರವ್ಯಗಳ ವ್ಯಸನ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ದೂರಾಗಬೇಕು ಎಂದು ತಿಳಿಸಿದರು.
ಬಿಲ್ಲವ ಮುಖಂಡ, ಸಮಾಜಸೇವಕ ರಾಮ್‍ಕುಮಾರ್ ಮುಂಡಿತ್ತಡ್ಕ ಅತಿಥಿಯಾಗಿ ಭಾಗವಹಿಸಿದ್ದರು. ಬಿಲ್ಲವ ಸಂಘ ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಸುವರ್ಣ, ರಾಮಣ್ಣ ಪೂಜಾರಿ ಬಾಂಕಾನ, ಡಾ. ಕೃಷ್ಣ ಮೋಹನ ಬಜಕೂಡ್ಲು, ರಾಜಪ್ಪ ಕಾಟುಕುಕ್ಕೆ, ಚಂಪಾವತಿ ಬಜಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.
ಬಿಲ್ಲವ ಸಂಘ ಕಾರ್ಯದರ್ಶಿ ಅಖಿಲೇಶ್ ಕಾನ, ಸ್ವಾಗತಿಸಿದರು. ರಾಜೇಶ್ವರಿ ಕಾನ ವಂದಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಗಸ್ಟ್ 30ರಂದು ಪೆರ್ಲ ವ್ಯಾಪಾರ ಭವನದ ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9ಗಂಟೆಯಿಂದ ಮಹಿಳಾ ಸಂಘದವರಿಂದ ಭಜನೆ, 10ಕ್ಕೆ ಧಾರ್ಮಿಕ ಸಭೆ ಜರಗಲಿರುವುದು. ಈ ಸಂದರ್ಭ ವಿವಿಧ ರಂಗಗಳಲ್ಲಿ ಗುರುತಿಸಿ ಕೊಂಡ ಸಮಾಜ ಭಾಂಧದವರಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಯಲಿರುವುದು. ಕಾರ್ಯಕ್ರಮದ ಪೂರ್ವಭಾವಿಯಾಗಿ ಆ. 23ರಂದು ಬೆಳಗೆಗ 9ರಿಂದ ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ಸಮಾಜಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆ ನಡೆಯುವುದು.



