ತಿರುವನಂತಪುರ: ಕೇರಳಂನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ಸ್ವಾತಂತ್ರ್ಯೋತ್ಸವವನ್ನು 'ವಂದೇ ಮಾತರಂ' ಹಾಡದೆ ಶನಿವಾರ ಆಚರಿಸಿತು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಗೀತೆ 'ಜನಗಣಮನ' ಮಾತ್ರ ಹಾಡಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಸೂಚನೆಗಳನ್ನು ಹೊರಡಿಸಿತ್ತು.
ತಿರುವನಂತಪುರದಲ್ಲಿ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಭಾಗವಹಿಸಿದ್ದ ರಾಜ್ಯಮಟ್ಟದ ಕಾರ್ಯಕ್ರಮ ಸೇರಿದಂತೆ ರಾಜ್ಯದ ಎಲ್ಲಾ ಅಧಿಕೃತ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯನ್ನು ಮಾತ್ರ ಹಾಡಲಾಯಿತು.
ಇದಕ್ಕೂ ಮೊದಲು ರಾಜ್ಯ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹ ಅವರು, ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕೇಂದ್ರ ಸರ್ಕಾರದ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ರವಾನಿಸಿದ್ದರು. ಅದರಲ್ಲಿ 'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾಗಿ 'ವಂದೇ ಮಾತರಂ' ಗೀತೆಯನ್ನು ಪೂರ್ಣವಾಗಿ ಹಾಡಬೇಕು ಎಂದು ಉಲ್ಲೇಖಿಸಲಾಗಿತ್ತು.
ನಂತರ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ, 'ವಂದೇ ಮಾತರಂ' ಹಾಡುವ ಬಗ್ಗೆ ರಾಜ್ಯ ಸರ್ಕಾರದ ನಿಲುವು ಸ್ವಾತಂತ್ರ್ಯ ದಿನದಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದರು. ಶಿಕ್ಷಣ ಇಲಾಖೆಯು ಶಾಲೆಗಳಿಗೆ ಹೊರಡಿಸಿದ್ದ ಸುತ್ತೋಲೆಯಲ್ಲಿ, ರಾಷ್ಟ್ರಗೀತೆ ಮಾತ್ರ ಹಾಡುವುದನ್ನು ಕಡ್ಡಾಯಗೊಳಿಸಿತ್ತು.
ರಾಜ್ಯ ಸರ್ಕಾರದ ಈ ನಿಲುವನ್ನು ಬಿಜೆಪಿ ನಾಯಕ ಶೋನ್ ಜಾರ್ಜ್ ಟೀಕಿಸಿದ್ದು, 'ಜಮಾತೆ ಇಸ್ಲಾಮಿ ರೀತಿಯ ಸ್ವಾರ್ಥ ಹಿತಾಸಕ್ತಿಯ ಗುಂಪಿಗೆ ಮುಖ್ಯಮಂತ್ರಿ ಶರಣಾಗಿದ್ದಾರೆ. 'ವಂದೇ ಮಾತರಂ' ಬಗ್ಗೆ ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಬಿಜೆಪಿ ಹೋರಾಡಲಿದೆ' ಎಂದು ಹೇಳಿದ್ದಾರೆ.

