ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಸಾದರಪಡಿಸುವ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಮಳೆಗಾಲದ ಮಹೋನ್ನತ ಯಕ್ಷಗಾನ ತಾಳಮದ್ದಳೆ ಆಗಸ್ಟ್ 23 ರಂದು ಭಾನುವಾರ ನೀರ್ಚಾಲು ಶಾಲಾ ವಠಾರದಲ್ಲಿ ಅಪರಾಹ್ನ 2 ರಿಂದ ಜರಗಲಿರುವುದು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ, ಸಾಮಾಜಿಕ ಧಾರ್ಮಿಕ ಮುಖಂಡ ಜಯದೇವ ಖಂಡಿಗೆ ದೀಪಬೆಳಗಿಸಿ ಉದ್ಘಾಟಿಸುವರು. ಅಗಲಿದ ಹಿರಿಯ ಕಲಾವಿದ ಡಾ. ಸೂರಿಕುಮೇರಿ ಗೋವಿಂದ ಭಟ್ ಇವರಿಗೆ ನುಡಿನಮನ ಸಲ್ಲಿಸಲಾಗುವುದು. ನಂತರ ಗುರುದಕ್ಷಿಣೆ (ದ್ರುಪದ ಗರ್ವಭಂಗ) ಕಥಾಭಾಗದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ, ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆಮದ್ದಳೆಯಲ್ಲಿ ಶ್ರೀಧರ ವಿಟ್ಲ, ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರು, ಶ್ರೀರಮಣ ಆಚಾರ್ಯ, ವಿಷ್ಣುಶರ್ಮ ವಾಟೆಪಡ್ಪು ಪಾಲ್ಗೊಳ್ಳಲಿದ್ದಾರೆ. ಕಲಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.


