ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಪ್ರಾಧಿಕಾರಗಳು ಇತ್ಯರ್ಥಪಡಿಸಿರುವ ದೂರು ಅರ್ಜಿಗಳ ಸಂಪೂರ್ಣ ವಿವರ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರಿದ್ದ ಪೀಠವು ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿತು.
ಮೇಲ್ಮನವಿ ಪ್ರಾಧಿಕಾರಗಳ ಮುಂದಿರುವ ಎಸ್‌ಐಆರ್ ಸಂಬಂಧಿತ ಅರ್ಜಿಗಳ ತ್ವರಿತ ವಿಲೇವಾರಿಗೆ ಅಧಿರ್ ರಂಜನ್ ಮನವಿ ಮಾಡಿದ್ದರು.
ನಿಯಮಬಾಹಿರವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಹೆಸರು ತೆಗೆದು ಹಾಕುತ್ತಿದೆ ಎಂಬ ದೂರು ಕೇಳಿ ಬಂದಿದ್ದರಿಂದ ಸುಪ್ರೀಂ ಕೋರ್ಟ್‌ನ ನಿಗಾದಲ್ಲಿ ಎಸ್‌ಐಆರ್ ನಡೆದಿತ್ತು.
ಮಾರ್ಚ್ 10ರಂದು ಸುಪ್ರೀಂ ಕೋರ್ಟ್ ಮೇಲ್ಮನವಿ ಪ್ರಾಧಿಕಾರಗಳನ್ನು ರಚಿಸಿತ್ತು. ಎಸ್‌ಐಆರ್ ಸಂಬಂಧಿತ ದೂರುಗಳ ವಿಲೇವಾರಿಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ನ್ಯಾಯಾಧೀಶರನ್ನು ನಿಯೋಜಿಸಿತ್ತು.
'ಹೆಸರು ರದ್ದಾದವರಿಗೆ ಪಡಿತರ ಸೌಲಭ್ಯ ಸಿಗುತ್ತಿಲ್ಲ. ಅವರ ಮೇಲ್ಮನವಿ ಇತ್ಯರ್ಥವಾಗುವವರೆಗೂ ಇದೇ ಸ್ಥಿತಿ ಇರಲಿದೆ' ಎಂದು ಚೌಧರಿ ಪರ ವಕೀಲರು ವಾದ ಮಂಡಿಸಿದರು.
'ಪಡಿತರ ವಿಚಾರವಾಗಿ ಕೋಲ್ಕತ್ತ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು. ಮೇಲ್ಮನವಿ ಪ್ರಾಧಿಕಾರಗಳ ಕುರಿತ ನಿಮ್ಮ ಕೋರಿಕೆಯನ್ನು ಪರಿಗಣಿಸುತ್ತೇವೆ' ಎಂದು ಪೀಠ ತಿಳಿಸಿತು.
'ಇತ್ಯರ್ಥ ಆಗಿರುವ ಮತ್ತು ಬಾಕಿ ಇರುವ ಅಪೀಲುಗಳ ವಿವರ ಒದಗಿಸಿ' ಎಂದು ಪೀಠವು ಆಯೋಗಕ್ಕೆ ನೋಟಿಸ್ ನೀಡಿತು.
ಎಸ್‌ಐಆರ್ ಸಂಬಂಧಿತ ಇತರೆ ಅರ್ಜಿಗಳ ವಿಚಾರಣೆ ನಡೆಯಲಿರುವ ಇದೇ 25ರಂದೇ ಈ ಅರ್ಜಿಯನ್ನೂ ಪರಿಗಣಿಸಲು ಆಯೋಗದ ಪರ ವಕೀಲ ಡಿ.ಎಸ್. ನಾಯ್ಡು ಮನವಿ ಮಾಡಿದ್ದರಿಂದ ವಿಚಾರಣೆ ಮುಂದೂಡಲಾಯಿತು.

