ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೊಡಾ ಜಿಲ್ಲೆಯ ರಾಮಕುಂಡ ಶಿಖರದಲ್ಲಿ ನಾಲ್ವರು ಶಂಕಿತ ಉಗ್ರರು ಓಡಾಡುತ್ತಿರುವ ವಿಡಿಯೊ ಹರಿದಾಡುತ್ತಿದ್ದು, ಭಾರತೀಯ ಸೇನೆಯು ಬೃಹತ್ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾಜ್ ಧರ್ ವಲಯಕ್ಕೆ ಸಮೀಪವಿರುವ ರಾಮಕುಂಡ ಶಿಖರವು ಅತ್ಯಂತ ದುರ್ಗಮ ಮತ್ತು ದಟ್ಟ ಕಾನನದ ಪ್ರದೇಶವಾಗಿದೆ. ಈ ಕಾರಣದಿಂದಲೇ ಉಗ್ರರು ಈ ಭಾಗದಿಂದ ಚಲನವಲನ ನಡೆಸುತ್ತಾರೆ. ಅಲ್ಲದೆ, ಅಡಗುದಾಣಗಳನ್ನೂ ನಿರ್ಮಿಸಿಕೊಳ್ಳುತ್ತಾರೆ. ದುರ್ಗಮ ಭೂಪ್ರದೇಶ, ದಟ್ಟ ಅರಣ್ಯ ಮತ್ತು ಪಕ್ಕದ ಪರ್ವತ ಪ್ರದೇಶಗಳೊಂದಿಗಿನ ಸಂಪರ್ಕವು ಈ ಪ್ರದೇಶವನ್ನು ಭದ್ರತೆಯ ದೃಷ್ಟಿಯಿಂದ ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶವನ್ನಾಗಿ ಮಾಡಿದೆ.
ಅಧಿಕೃತ ಮೂಲಗಳ ಪ್ರಕಾರ, ಸೋಮವಾರ (ಆಗಸ್ಟ್ 10) ಮಧ್ಯಾಹ್ನ ಸ್ಥಳೀಯರು ಈ ದೃಶ್ಯಗಳನ್ನು ಸೆರೆಹಿಡಿದು ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ನಂತರ, ವ್ಯಾಪಕ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಶಂಕಿತರ ಗುಂಪನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸುತ್ತಮುತ್ತಲಿನ ಅರಣ್ಯಗಳು, ಪರ್ವತ ಶ್ರೇಣಿಗಳು ಮತ್ತು ಪರ್ವತ ಮಾರ್ಗಗಳಲ್ಲಿ ತೀವ್ರ ಶೋಧ ನಡೆಸುತ್ತಿವೆ.
ಉಧಮ್‌ಪುರದಿಂದ ಹೆಚ್ಚುವರಿ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಗುಂಪಿನಲ್ಲಿ ಮೂವರು ವಿದೇಶಿ ಭಯೋತ್ಪಾದಕರು ಮತ್ತು ಒಬ್ಬ ಸ್ಥಳೀಯ ಉಗ್ರನಿರುವ ಬಗ್ಗೆ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ರಾಮಕುಂಡ ಶಿಖರ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿಯೂ ಭದ್ರತಾ ಪಡೆ ಶೋಧ ನಡೆಸುತ್ತಿದೆ.
ಈ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು, ಉಗ್ರರು ಹಳೆಯ ಒಳನುಸುಳುವ ಮಾರ್ಗಗಳ ಮೂಲಕ ದೇಶಕ್ಕೆ ಪ್ರವೇಶಿಸಲು ಯತ್ನಿಸಬಹುದು ಎಂದು ಶಂಕಿಸಲಾಗಿದೆ.

