ರಾಯಪುರ: ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಛತ್ತೀಸಗಢದ ಕಾಂಗ್ರೆಸ್ ಮುಖಂಡ ರಾಮ್‌ಗೋಪಾಲ್ ಅಗರ್ವಾಲ್ ಅವರನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿ ಮಂಗಳವಾರ ಬಂಧಿಸಿದೆ.
ಅಗರ್ವಾಲ್ ಅವರು ಈ ಹಿಂದೆ ಛತ್ತೀಸಗಢ ಕಾಂಗ್ರೆಸ್ ಘಟಕದ ಖಜಾಂಚಿಯಾಗಿದ್ದರು. ಅವರ ವಿರುದ್ಧ ಇ.ಡಿ. ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು.
ಕೆಲ ಹಗರಣಗಳಿಗೆ ಸಂಬಂಧಿಸಿ ಛತ್ತೀಸಗಢ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ ಕೂಡ ಜುಲೈನಲ್ಲಿ ಅಗರ್ವಾಲ್ ಅವರನ್ನು ಬಂಧಿಸಿತ್ತು.
'ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ 2019 ಮತ್ತು 2022ರ ಮಧ್ಯೆ ಅಬಕಾರಿ ಹಗರಣ ನಡೆದಿತ್ತು. ಹಿರಿಯ ಅಧಿಕಾರಿಗಳು, ರಾಜಕೀಯ ಮುಖಂಡರು ಅಬಕಾರಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಕ್ಕೆ ₹2,883 ಕೋಟಿ ನಷ್ಟ ಉಂಟು ಮಾಡಿದ್ದರು' ಎಂದು ಇ.ಡಿ. ತಿಳಿಸಿದೆ.
'ರಾಜಕೀಯ ಪ್ರಭಾವಿಗಳ ಸೂಚನೆ ಮೇರೆಗೆ ಅಕ್ರಮ ಮದ್ಯ ಮಾರಾಟಗಾರರಿಂದ ಅಪಾರ ಪ್ರಮಾಣದ ಕಮಿಷನ್ ಪಡೆಯಲಾಗಿತ್ತು' ಎಂದು ಆರೋಪಿಸಿದೆ.
ಈವರೆಗೆ 7 ಆರೋಪ ಪಟ್ಟಿ ಸಲ್ಲಿಸಿರುವ ಇ.ಡಿ, 85 ಮಂದಿಯನ್ನು ಆರೋಪಿಗಳೆಂದು ಉಲ್ಲೇಖಿಸಿದೆ. ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಸೇರಿ ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರುಗಳಿವೆ.

