ನವದೆಹಲಿ : ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವುದನ್ನು ಆರ್ಥಿಕ ಹೊರೆಯ ಕಾರಣಕ್ಕೆ ರಾಜ್ಯ ಸರ್ಕಾರಗಳು ವಿರೋಧಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ವಿಷಯವನ್ನು ಮರುಪರಿಶೀಲಿಸಿ, ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ಆರ್ಥಿಕ ಹೊರೆ ಕುರಿತು ರಾಜ್ಯಗಳ ಕಳವಳಗಳು ತಪ್ಪಾದ ಕಲ್ಪನೆಯಿಂದ ಕೂಡಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ಜಾಯ್‌ಮಾಲ್ಯಾ ಬಾಗ್ಚಿ, ವಿ. ಮೋಹನಾ ಅವರನ್ನು ಒಳಗೊಂಡ ಪೀಠ ಬುಧವಾರ ಹೇಳಿದೆ.
ಇತರ ಸರ್ಕಾರಿ ನೌಕರರಿಗೆ ನಿಗದಿಪಡಿಸಲಾಗಿರುವ ನಿವೃತ್ತಿ ವಯಸ್ಸಿನ ಹೊರತಾಗಿಯೂ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಕುರಿತು ಮರುಪರಿಶೀಲನೆ ನಡೆಸುವಂತೆ ಪೀಠವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
'ಕಾರಣಗಳು ಸಮರ್ಥನೀಯವಲ್ಲ':
ಅನುಭವಿ ನ್ಯಾಯಾಂಗ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸುವುದರಿಂದ ಆಗುವ ಆರ್ಥಿಕ ಹೊರೆಯು, ಅವರನ್ನು ನಿವೃತ್ತಿಗೊಳಿಸಿ ಆ ಸ್ಥಾನಗಳಿಗೆ ಹೊಸಬರನ್ನು ನೇಮಿಸುವುದರಿಂದ ಆಗುವ ಹೊರೆಗಿಂತ ಕಡಿಮೆ ಇರಬಹುದು ಎಂದು ಪೀಠ ಉಲ್ಲೇಖಿಸಿದೆ. ಹೀಗಾಗಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಪ್ರಸ್ತಾವವನ್ನು ನಿರಾಕರಿಸಲು ರಾಜ್ಯ ಸರ್ಕಾರಗಳು ನೀಡಿರುವ ಕಾರಣಗಳು ಸಮರ್ಥನೀಯವಲ್ಲ ಎಂದೂ ಹೇಳಿದೆ.
'ಈ ವಿಷಯವನ್ನು ತುರ್ತಾಗಿ ಪರಿಶೀಲಿಸಿ, ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು' ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದರೆ, ಅದರ ಪ್ರಯೋಜನವು ಮಧ್ಯಂತರ ಅವಧಿಯಲ್ಲಿ ನಿವೃತ್ತರಾಗುವ ನ್ಯಾಯಾಂಗ ಅಧಿಕಾರಿಗಳಿಗೂ ವಿಸ್ತರಿಸಬೇಕು ಎಂದೂ ಅದು ಹೇಳಿದೆ.
ದೇಶದಾದ್ಯಂತ ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಏಕರೂಪವಾಗಿ ಹೆಚ್ಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಈ ಹಿಂದೆ ಸುಪ್ರೀಂ ಕೋರ್ಟ್, ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 61 ವರ್ಷಗಳಿಗೆ ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು.
ನಿವೃತ್ತಿ ವಯಸ್ಸು ಎಷ್ಟಿದೆ:
ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ವರ್ಷಗಳಿವೆ. ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 60 ವರ್ಷಗಳಿವೆ. ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಆಯೋಗವು ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಏರಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ ಸುಪ್ರೀಂ ಕೋರ್ಟ್ 2002ರಲ್ಲಿ ಈ ಶಿಫಾರಸನ್ನು ತಿರಿಸಿತ್ತು.
ಆ ನಂತರ ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವತ್ತ ಹೆಜ್ಜೆಯಿಟ್ಟಿವೆ.

