ನವದೆಹಲಿ: ಈಶಾನ್ಯ ದೆಹಲಿ ಗಲಭೆಯ (2020) ಸಂಚಿನ ಪ್ರಕರಣದ ಆರೋಪಿ ಉಮರ್ ಖಾಲಿದ್ ಬರೆದ 'ಫ್ರ್ಯಾಕ್ಚರ್ಡ್ ಕಮ್ಯೂನಿಟಿಸ್: ಆದಿವಾಸಿ ಹಿಸ್ಟರೀಸ್ ಆಯಂಡ್ ದ ಪಾಲಿಟಿಕ್ಸ್ ಆಫ್ ಪವರ್' ಪುಸ್ತಕ ಕುರಿತು ಸೋಮವಾರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಸಭಾಂಗಣದಲ್ಲಿ ಸಂವಾದ ನಿಗದಿಯಾಗಿತ್ತು.
ಆದರೆ, ಆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಕೂಡದು ಎಂದು ಜೆಎನ್‌ಯು ತಾಕೀತು ಮಾಡಿದೆ ಎಂದು ವಿದ್ಯಾರ್ಥಿ ಸಂಘವು ತಿಳಿಸಿದೆ.
'ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಖಾಲಿದ್ ಪುಸ್ತಕ ಕುರಿತ ಸಂವಾದವನ್ನು ಸಮಾಜ ವಿಜ್ಞಾನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈಗ ಅಲ್ಲಿ ಸಂವಾದ ನಡೆಸಲು ಅವಕಾಶ ನಿರಾಕರಿಸಿರುವುದರಿಂದ ಬೇರೆ ಸ್ಥಳದಲ್ಲಿ ನಡೆಸಲಿದ್ದೇವೆ' ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಮೂಲ ಸ್ಥಳದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ರದ್ದುಪಡಿಸಿದ್ದಕ್ಕೆ ಕಾರಣ ನೀಡಿಲ್ಲ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರಭು ಮಹಾಪಾತ್ರ, ಉಮಾ ಚಕ್ರವರ್ತಿ, ಲೇಖಕ ಹಾಗೂ ಪತ್ರಕರ್ತ ಶುದ್ಧಬ್ರತ ಸೇನ್‌ಗುಪ್ತಾ, ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್, ಬನೋಜ್ಯೋತ್ಸ್ನಾ ಲಾಹಿಡಿ ಭಾಗಿಯಾಗಲಿದ್ದರು.
2020ರ ದೆಹಲಿ ಗಲಭೆಗೆ ಸಂಚು ರೂಪಿಸಿದವರು ಎಂಬ ಆರೋಪದ ಮೇಲೆ ಖಾಲಿದ್ ಮತ್ತು ಇಮಾಮ್ ಅವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

