ಕಾಸರಗೋಡು: ರಾಜ್ಯದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಶನಿವಾರವೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಕಾಸರಗೋಡು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು.
ಬಿರುಸಿನ ಮಳೆಗೆ ಸಮುದ್ರದಲ್ಲಿ ಬಹತ್‍ಗಾತ್ರದ ಅಲೆಗಳು ಉಂಟಾಗುವ ಸಾಧ್ಯತೆಯಿರುವುದಾಗಿ ಸಮುದ್ರ ಅಧ್ಯಯನ ಕೇಂದ್ರ ಎಚ್ಚರಿಸಿದೆ. ಮೀನು ಕಾರ್ಮಿಕರು ಹಾಗೂ ತೀರ ನಿವಾಸಿಗಳು ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ ದಳ, ಪೆÇಲೀಸರು ಸೇರಿದಂತೆ ಬಿರುಸಿನ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿರುವುದರಿಂದ ರಾಣಿಪುರಂ ಗಿರಿಧಾಮದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಜಲಾಶಯಗಳಲ್ಲಿನ ಮನರಂಜನಾ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನಗಾಳಿಯೊಂದಿಗೆ ಭಾರಿ ಮಳೆ ಮುಂದುವರಿದಿದೆ. ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ತುರ್ತು ಪರಿಸ್ಥಿತಿ ಎದುರಾದಲ್ಲಿ ನಿಯೋಜನೆಗೊಳ್ಳಲು ಅಗ್ನಿಶಾಮಕ ದಳ ಸನ್ನದ್ಧವಾಗಿದೆ.
ಕಡಿದು ಬಿದ್ದ ವಿದ್ಯುತ್ ತಂತಿಗಳಿಂದಾಗಿ ಅಪಘಾತಗಳಾಗುವ ಅಪಾಯವಿರುವುದರಿಂದ ಪಾದಚಾರಿಗಳು ನೀರುಹರಿಯುವ ನೀರು ರಸ್ತೆ ಅಥವಾ ನೀರು ದಾಸ್ತಾನಿರುವ ಪ್ರದೇಶಗಳಿಗೆ ಇಳಿಯುವ ಮುನ್ನ, ವಿದ್ಯುತ್ ಆಘಾತದ ಅಪಾಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೆಳಿಗ್ಗೆ ಬೇಗನೆ ಕೆಲಸ ಅಥವಾ ತರಗತಿಗಳಿಗೆ ತೆರಳುವವರು ಈ ವಿಷಯದ ಬಗ್ಗೆ ವಿಶೇಷ ಗಮನಹರಿಸುವಂತೆಯೂ ಸೂಚಿಸಲಾಗಿದೆ.
ವಿದ್ಯುತ್ ತಂತಿಗಳಿಗೆ ಸಂಬಂಧಿಸಿದ ಯಾವುದೇ ಸಂಭಾವ್ಯ ಅಪಾಯ ಗಮನಿಸಿದಲ್ಲಿ, 1912 ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಕೆಎಸ್‍ಇಬಿಗೆ ಮಾಹಿತಿ ನೀಡಬೇಕು. ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾ ನಿಯಂತ್ರಣ ಕೊಠಡಿಗಳು ದಿನದ 24 ತಾಸುಕಾಳ ಕಾರ್ಯನಿರ್ವಹಿಸುತ್ತಿದ್ದು, ಸಂಭಾವ್ಯ ಅಪಾಯಗಳ ಬಗ್ಗೆ ಮಾಹಿತಿ ಅಥವಾ ಸಹಾಯ ಪಡೆಯಲು 1077 ಮತ್ತು 1070 ಎಂಬ ಟೋಲ್-ಫ್ರೀ ಸಂಖ್ಯೆಗಳನ್ನೂ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಭೂಕುಸಿತ ಮತ್ತು ಮಣ್ಣು ಕುಸಿತದ ಸಾಧ್ಯತೆಯಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ತಗ್ಗುವವರೆಗೂ ನಿಷೇಧ ಜಾರಿಯಲ್ಲಿರಲಿದೆ. ಈ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಭೂಕುಸಿತ-ಸಂಭವನೀಯ ಸ್ಥಳಗಳಲ್ಲಿ ಸುರಕ್ಷತಾ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಮತ್ತು ಅಗತ್ಯ ಪ್ರಯಾಣ ನಿಬರ್ಂಧಗಳನ್ನು ಜಾರಿಗೆ ತರಲು ಪೆÇಲೀಸ್ ಇಲಾಖೆ, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ.
ತುರ್ತು ಸಹಾಯಕ್ಕಾಗಿ ನಿಯಂತ್ರಣಕೊಠಡಿ ಕಾರ್ಯಾಚರಿಸುತ್ತಿದೆ. ಕಾಸರಗೋಡು - 04994 230021, 9188944318, ಹೊಸದುರ್ಗ - 04672 204042, 95624 24586, ಮಂಜೇಶ್ವರ - 04998 244044, 9747618464, ವೆಳ್ಳರಿಕುಂಡು - 04672 242320, 9249028653.
ಸಮುದ್ರಕೊರೆತದಿಂದ ಚೌಕಿ ಕಡಪ್ಪುರ ಬಳಿ ಸಿಪಿಸಿಆರ್‍ಐ ಕೇಂದ್ರದ ತೋಟದ ಆವರಣಗೋಡೆ ವರೆಗೂ ಬೃಹತ್ ಅಲೆಗಳು ಅಪ್ಪಳಿಸುತ್ತಿದೆ.
-----------------------------

