ಬದಿಯಡ್ಕ: ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ ಬಗ್ಗೆ ಸ್ವಾಭಿಮಾನಿಗಳಾಗಬೇಕೆಂಬ ಉದ್ದೇಶದೊಂದಿಗೆ ಬಿಜೆಪಿ ರಾಷ್ಟ್ರ ಸ್ವಾಭಿಮಾನ್ ಸಮಿತಿ ಎಂಬ ಶಿರೋನಾಮೆಯೊಂದಿಗೆ ತಿರಂಗ ಯಾತ್ರೆಯನ್ನು ಹಮ್ಮಿಕೊಂಡಿದೆ. ತನ್ನ ದೇಶಕ್ಕಾಗಿ ತಾನು ಏನು ಮಾಡಬೇಕು, ತನ್ನನ್ನು ಸಮರ್ಪಿಸಿಕೊಳ್ಳುವುದು ಹೇಗೆ? ಮುಂದಿನ ಪೀಳಿಗೆಗೆ ರಾಷ್ಟ್ರಾಭಿಮಾನ ಜಾಗೃತವಾಗಲು ಪೂರಕವಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕು. ಭಾರತೀಯರಿಗೆ ಸ್ವಾತಂತ್ರ್ಯ ಲಭಿಸಿರುವುದು ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದಾಗ. 2045ರಲ್ಲಿ ಭಾರತವು ಸ್ವಾಭಿಮಾನ ರಾಷ್ಟ್ರವಾಗಿ ವಿಶ್ವಕ್ಕೇ ಗುರುವಾಗಿ ನಿಲ್ಲಬೇಕೆಂಬುದೇ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಹೇಳಿದರು.
ರಾಷ್ಟ್ರ ಸ್ವಾಭಿಮಾನ ಸಮಿತಿ ಬದಿಯಡ್ಕ ಮಂಡಲದ ನೇತೃತ್ವದಲ್ಲಿ ಗುರುವಾರ ಸಂಜೆ ಬದಿಯಡ್ಕದಲ್ಲಿ ಜರಗಿದ ತಿರಂಗ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿಗಾಗಿ ರಸ್ತೆ ಸಹಿತ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಬೆಳಕಿಗೆ ತಂದಿದೆ. ಸ್ವಾಭಿಮಾನಿ ರಾಷ್ಟ್ರದ ಕಲ್ಪನೆ ಎಂದರೆ ಕೇವಲ ಭೌತಿಕ ಅಭಿವೃದ್ಧಿಯಷ್ಟೇ ಅಲ್ಲದೆ, ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶದ ಬಗ್ಗೆ ಹೆಮ್ಮೆಪಡುವ ವಾತಾವರಣವನ್ನು ನಿರ್ಮಿಸುವುದು ಈ ದೂರದೃಷ್ಟಿಯ ಮುಖ್ಯ ಉದ್ದೇಶವಾಗಿದೆ. ತ್ರಿವರ್ಣ ಧ್ವಜ ಮತ್ತು ದೇಶದ ಚಿಹ್ನೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ `ತಿರಂಗಾ ಯಾತ್ರೆ'ಯಂತಹ ಕಾರ್ಯಕ್ರಮಗಳ ಮೂಲಕ ರಾಷ್ಟ್ರಧ್ವಜದ ಹಿರಿಮೆ ಹಾಗೂ ದೇಶದ ಒಗ್ಗಟ್ಟಿನ ಪ್ರಾಮುಖ್ಯತೆಯನ್ನು ಯುವಜನತೆಗೆ ಪ್ರತ್ಯಕ್ಷವಾಗಿ ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸುವುದು ಎಂದರೆ ಗಡಿಯಲ್ಲಿ ನಿಂತು ಹೋರಾಡುವುದಷ್ಟೇ ಅಲ್ಲ. ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದೇ ನಿಜವಾದ ರಾಷ್ಟ್ರಸೇವೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು, ದೇಶದ ಕಾನೂನುಗಳನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಯುವಜನತೆ ಮತ್ತು ಮಕ್ಕಳಲ್ಲಿ ದೇಶಪ್ರೇಮದ ಬೀಜ ಬಿತ್ತುವುದು ಭವಿಷ್ಯ ಭಾರತದ ಭದ್ರತೆಗೆ ಅತ್ಯಗತ್ಯ. ಭಾರತದ ಭವ್ಯ ಪರಂಪರೆ, ತ್ಯಾಗ-ಬಲಿದಾನಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಶಾಲಾ-ಕಾಲೇಜು ಹಂತದಲ್ಲೇ ಪರಿಣಾಮಕಾರಿಯಾಗಿಸಬೇಕು. ಸ್ವಾತಂತ್ರ್ಯದ ಶತಮಾನೋತ್ಸವದತ್ತ ಧಾವಿಸುತ್ತಿರುವ ಭಾರತವು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಲು ಸಜ್ಜಾಗುತ್ತಿದೆ ಎಂದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕೋಝಿಕ್ಕೋಡು ವಲಯ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಮಾತನಾಡಿದರು. ಮಂಡಲ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಶ್ರೀಧರ ಬೆಳ್ಳೂರು ವಂದಿಸಿದರು. ಬೋಳುಕಟ್ಟೆ ಮೈದಾನದಿಂದ ಆರಂಭವಾದ ಮೆರವಣಿಗೆಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಗ್ರಾಮಪಂಚಾಯಿತಿ ಅಧ್ಯಕ್ಷರುಗಳಾದ ಶಂಕರ ಡಿ.ಬದಿಯಡ್ಕ, ಯಶೋಧ ಕುಂಬ್ಡಾಜೆ, ಮಾಲಿನಿ ಬೆಳ್ಳೂರು, ಜಿಲ್ಲಾಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

.jpg)
.jpg)
