ನವದೆಹಲಿ: ಸಂಕಷ್ಟದ ಸಮಯದಲ್ಲಿ ದೇಶದ ಯುವಜನತೆಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಹೀಗಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಮನವಿ ಮಾಡಿದ್ದಾರೆ.
ಹೇಮಂತ್ ಸೊರೆನ್‌ಗೆ ಪತ್ರ ಬರೆದಿರುವ ರಾಹುಲ್, ಜಾರ್ಖಂಡ್ ಸರ್ಕಾರ ಈಗಾಗಲೇ ವಿದ್ಯಾರ್ಥಿಗಳೊಂದಿಗೆ ಮಾತುಕತೆ ಆರಂಭಿಸಿದ್ದು, ಹಲವು ಬೇಡಿಕೆಗಳಿಗೆ ಸಮ್ಮತಿಸಿದೆ. ಆದಾಗ್ಯೂ ರಾಂಚಿಯಲ್ಲಿ ಕೆಲವು ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ನೀವು ಖುದ್ದಾಗಿ ಭೇಟಿಯಾಗಬೇಕು ಎಂದು ಸೂಚಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ. ಇದರಿಂದ ಅವರ ಕಳವಳ, ಸಮಸ್ಯೆ ಬಗೆಹರಿಸಲು ಸರ್ಕಾರಕ್ಕಿರುವ ಬದ್ಧತೆ ಮತ್ತಷ್ಟು ದೃಢವಾಗುತ್ತದೆ. ಭಾರತದ ಯುವಜನತೆಯೇ ಈ ದೇಶದ ಭವಿಷ್ಯ. ಈ ಬಿಕ್ಕಟ್ಟಿನ ಸಮಯದಲ್ಲಿ ಅವರಿಗೆ ಧೈರ್ಯ ತುಂಬುವುದು ಮತ್ತು ಬೆಂಬಲ ನೀಡುವುದು ನಮ್ಮ ಜವಾಬ್ದಾರಿ. ದಯವಿಟ್ಟು ಅವರ ಅಳಲನ್ನು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ರಾಹುಲ್ ಹೇಳಿದ್ದಾರೆ.
ತಮ್ಮ ಪ್ರಮುಖ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಭಾನುವಾರ ರಾಂಚಿ ಸೇರಿದಂತೆ ಜಾರ್ಖಂಡ್‌ನ ವಿವಿಧ ನಗರಗಳಲ್ಲಿ ಸಿಎಂ ಹೇಮಂತ್ ಸೊರೆನ್ ಹಾಗೂ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳ ಮೇಲೆ ಶೋಷಣೆ ಮತ್ತು ದೌರ್ಜನ್ಯ ನಡೆಸುತ್ತಿದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿದೆ. ಒಂದು ದಶಕದ ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆ ಈಗ ಉಳಿದಿಲ್ಲ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಆರೋಪಿಸಿದ್ದಾರೆ.
ಜಾರ್ಖಂಡ್‌ನಲ್ಲಿ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಸೊರೆನ್ ಅವರು ರಚಿಸಿರುವ ಸಮಿತಿಯ ಮೂಲಕ ಸರ್ಕಾರ ಮಾತುಕತೆ ಆರಂಭಿಸಿರುವುದನ್ನು ಅವರು ಶ್ಲಾಘಿಸಿದ್ದಾರೆ.
ರಾಂಚಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ರಾಹುಲ್ ಈ ಹಿಂದೆ ಖಂಡಿಸಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳ ಮೇಲಿನ ಯಾವುದೇ ರೀತಿಯ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಅದು ಎಲ್ಲೇ ನಡೆದರೂ ಸರಿ, ನಾವು ಅದನ್ನು ವಿರೋಧಿಸುತ್ತೇವೆ ಮತ್ತು ಬೆಂಬಲಿಸುವುದಿಲ್ಲ. ಈ ವಿಷಯದಲ್ಲಿ ನಮಗೆ ಯಾವುದೇ ಗೊಂದಲವಿಲ್ಲ ಎಂದು ಕಳೆದ ವಾರ ರಾಹುಲ್ ಸ್ಪಷ್ಟಪಡಿಸಿದ್ದರು.

