ಕಾಸರಗೋಡು: ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅವರಿಗೆ ಭಾರತ್ ಸೇವಕ್ ಸಮಾಜದ 'ಭಾರತ್ ಸೇವಕ್ ರಾಷ್ಟ್ರೀಯ ಪುರಸ್ಕಾರ' ಲಭಿಸಿದೆ.
ತಿರುವನಂತಪುರದ ಸದ್ಭಾವನಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸೆಂಟ್ರಲ್ ಭಾರತ್ ಸೇವಕ್ ಸಮಾಜ್‍ನ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ. ಎಸ್. ಬಾಲಚಂದ್ರನ್ ಅವರು ಪ್ರಶಸ್ತಿ ಪ್ರದಾನ ಮಾಡಿ ಅಶ್ವಿನಿ ಅವರನ್ನು ಸನ್ಮಾನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆಯಾಗಿ ಹಾಗೂ ಅಕ್ಷಯಮಿತ್ರ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಯಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಮಹತ್ವದ ಕಾರ್ಯಗಳಿಗೆ ಈ ಪ್ರಶಸ್ತಿ ಸಂದಿದೆ. ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಗರಿಷ್ಠ ಸಂಖ್ಯೆಯ ಜನರಿಗೆ ತಲುಪಿಸಲು ಮತ್ತು ಮಾದಕ ವಸ್ತುಗಳು ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಡೆಸಿದ ಪ್ರಯತ್ನಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.



